ಮಂಗಳೂರು: ಕೋವಿಡ್ನಿಂದ ಜನರು ಭಯ, ನೋವು, ಸಂಕಷ್ಟಗಳಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಜಂಜಾಟ ಹಾಗೂ ಕಚ್ಚಾಟ ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ ಎಂದು ಶಾಸಕ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಅವರ ಮಧ್ಯೆ ರಾಜಕೀಯ ಏನೇ ಇದ್ದರೂ ಇದೇ ಸಮಯ ಬೇಕಿತ್ತೆ. ಈ ಬಗ್ಗೆ ಇನ್ನಾದರೂ ಅರ್ಥ ಮಾಡಿಕೊಂಡು ತಮ್ಮ ರಾಜಕೀಯ ಜಂಜಾಟವನ್ನು ಬಿಜೆಪಿಗರು ಸ್ವಲ್ಪ ಕಾಲ ಮುಂದೆ ಹಾಕಲಿ ಎಂದು ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ನೋವು, ಅಗತ್ಯತೆ, ಸಂಕಷ್ಟಗಳ ಬಗ್ಗೆ ಚಿಂತೆಯಿಲ್ಲ. ಇದೊಂದು ಕರುಣೆಯಿಲ್ಲದ ಸರ್ಕಾರವಾಗಿದ್ದು, ಅಧಿಕಾರಕ್ಕಾಗಿ ಎಷ್ಟೊಂದು ಸಭೆ, ಕ್ಯೂ ನಿಲ್ಲುವ ಇವರು ಕೋವಿಡ್ಗಾಗಿ ಎಂದಾದರೂ ಸಭೆ ನಡೆಸಿದ್ದಾರೆಯೇ, ಕ್ಯೂ ನಿಂತಿದ್ದಾರೆಯೇ. ಇವರು ಅಧಿಕಾರಕ್ಕೋಸ್ಕರ ಕಚ್ಚಾಟ ಮಾಡುವ ಮೂಲಕ ದೇಶದಲ್ಲೇ ರಾಜ್ಯದ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ಶಾಸಕ ಖಾದರ್ ವಾಗ್ದಾಳಿ ತೈಲಬೆಲೆ ಹಾಗೂ ಅಡುಗೆ ಅನಿಲ ದರ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನತೆಯ ಮೇಲೆ ತೆರಿಗೆ ದಾಳಿ ಮಾಡುತ್ತಿದೆ. ಇದೊಂದು ತೆರಿಗೆ ಭಯೋತ್ಪಾದನೆ ಆಗಿದ್ದು, ಇತಿಹಾಸದಲ್ಲಿ ಯಾವುದೇ ಸರ್ಕಾರ ಮಾಡದ ಕಾರ್ಯವನ್ನು ಬಿಜೆಪಿ ಸರ್ಕಾರ ಈ ಏಳು ವರ್ಷಗಳಲ್ಲಿ ಪೆಟ್ರೋಲ್ ದರ ಶತಕ ಭಾರಿಸುವ ಮುಖೇನ ಮಾಡಿದೆ. ಕೇಂದ್ರ ಸರ್ಕಾರದ ಮುಂದೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲ. ಇವರು ತೈಲಬೆಲೆ ಏರಿಸುವ ಮೂಲಕ ಖಜಾನೆ ತುಂಬಿಸಲು ಹೊರಟಿದ್ದಾರೆ. ದೇಶದ ಪೆಟ್ರೋಲ್ ಬಂಕ್ಗಳು ಕೇಂದ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹಿಸುವ ಬೂತ್ ಆಗಿದೆ ಎಂದು ಖಾದರ್ ಹೇಳಿದರು.
ಈ ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಇದ್ದಾರೆ. ಇದು ಜನಸಾಮಾನ್ಯರ ಬುದ್ಧಿಗೆ ಸವಾಲೆಸೆಯುವಂತೆ ಇದೆ. ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಬಂಗುಡೆ, ಬೂತಾಯಿ ಮೀನಿಗೆ ಹೆಚ್ಚಳ ಆಗಿಲ್ವೇ ಎಂದು ಕೇಳಿ ಮೀನುಗಾರರಿಗೆ ಅಣಕಿಸುವ, ಅವಮಾನ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಬಂಗುಡೆ, ಬೂತಾಯಿಗೆ ತೆರಿಗೆ ವಿಧಿಸುವ ಅಧಿಕಾರ ಇಲ್ಲ. ಇಲ್ಲದಿದ್ದಲ್ಲಿ ಅದಕ್ಕೂ ಬಿಜೆಪಿ ಸರ್ಕಾರ ತೆರಿಗೆ ವಿಧಿಸುತ್ತಿತ್ತು. ಈ ರೀತಿಯಲ್ಲಿ ಹೇಳಿಕೆ ನೀಡಿದವರು ತಕ್ಷಣ ತಮ್ಮ ಮಾತನ್ನು ಹಿಂಪಡೆಯಲಿ ಎಂದು ಖಾದರ್ ಆಗ್ರಹಿಸಿದರು.