ಮಂಗಳೂರು :ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸ್ಪಷ್ಟ ನಿಲುವು ಇರದ ಕಾರಣ ಗೊಂದಲ ಸೃಷ್ಟಿಯಾಗುತ್ತಿದೆ. ಸರ್ಕಾರ ಹೇಳುವುದು ಒಂದು ಮಾಡುವುದು ಮತ್ತೊಂದು. ಆದ್ದರಿಂದ ತಕ್ಷಣ ಈ ಬಗ್ಗೆ ಜಿಲ್ಲಾಡಳಿತ ಸಭೆ ಕರೆದು ಸ್ಪಷ್ಟನೆ ನೀಡಲಿ ಎಂದು ಶಾಸಕ ಯು ಟಿ ಖಾದರ್ ಎಂದರು.
ನಗರದದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಪಿಎಂಸಿಯಲ್ಲಿಯೇ ಮಾರುಕಟ್ಟೆ ಸ್ಥಳಾಂತರವಾಗುವುದಾದಲ್ಲಿ ಅಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿ. ಅಲ್ಲದೆ ಎಷ್ಟು ಸಮಯದ ಒಳಗೆ ಸೆಂಟ್ರಲ್ ಮಾರುಕಟ್ಟೆ ಪುನರ್ ನಿರ್ಮಾಣವಾಗಲಿದೆ. ಆ ಬಳಿಕ ಎಲ್ಲಾ ವ್ಯಾಪಾರಿಗಳಿಗೆ ಇಲ್ಲಿ ಮತ್ತೆ ಅಂಗಡಿಗಳನ್ನು ನೀಡಲಾಗುತ್ತದೆಯಾ ಎಂದು ಜಿಲ್ಲಾಡಳಿತ ಬರವಣಿಗೆಯಲ್ಲಿ ಸ್ಷಷ್ಟವಾಗಿ ನೀಡಲಿ ಎಂದು ಆಗ್ರಹಿಸಿದರು.
ಕೊರೊನಾ ಹಿನ್ನೆಲೆ ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ದೃಷ್ಟಿಯಿಂದ ವ್ಯಾಪಾರಸ್ಥರು ಎಪಿಎಂಸಿಯಲ್ಲಿ ಸರಿಯಾದ ಮೂಲಸೌಕರ್ಯಗಳು ಇಲ್ಲದಿದ್ದರೂ ಸ್ಥಳಾಂತರಗೊಂಡರು. ಇದೀಗ ಅನ್ಲಾಕ್ ಆಗಿರುವುದರಿಂದ ಸೆಂಟ್ರಲ್ ಮಾರುಕಟ್ಟೆ ಮತ್ತೆ ತೆರೆಯಬೇಕು ಇಲ್ಲ ಎಪಿಎಂಸಿಯಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಬೇಕು. ಅಂದು ಕೋವಿಡ್-19ಗೆ ಸಂಬಂಧಿಸಿದಂತೆ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿತ್ತೇ ಹೊರತು ಶಾಶ್ವತ ಸ್ಥಳಾಂತರ ಎಂದು ಎಲ್ಲೂ ಹೇಳಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಶಾಸಕ ಯು.ಟಿ.ಖಾದರ್ ಒಂದು ಬಾರಿ ಸ್ಥಳಾಂತರವಾದ ಬಳಿಕ ಸದ್ಯಕ್ಕೆ ಇಲ್ಲಿಗೆ ಬರಲಾಗುವುದಿಲ್ಲ. ನೂತನ ಮಾರುಕಟ್ಟೆ ನಿರ್ಮಾಣವಾದ ಬಳಿಕವೇ ಎಲ್ಲಾ ಮಳಿಗೆಗಳನ್ನು ಕೊಡಲಾಗುವುದು ಎಂದು ಯಾರಲ್ಲೂ ಹೇಳಿಲ್ಲ. ಎಪಿಎಂಸಿಗೆ ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ಮಾತ್ರ ಮಾಡಲಾಗಿದೆ. ಆದರೆ, ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಒಂದು ಸಲ ಅಲ್ಲಿಗೆ ಹೋಗಿದ್ದಾರೆಯೇ ಹೊರತು ಮತ್ತೆ ಅಲ್ಲಿಗೆ ಹೋಗಿ ವ್ಯಾಪಾರಿಗಳ ಸಂಕಷ್ಟಗಳ ಬಗ್ಗೆ ವಿಚಾರಿಸಿಲ್ಲ. ಇದರ ಕೇಂದ್ರ ರೂವಾರಿ ಪೊನ್ನುರಾಜ್ ಅವರ ಪತ್ತೆಯಿಲ್ಲ.
ಸ್ಥಳಾಂತರ ಮಾಡುವಾಗ ಸಂಸದರು, ಶಾಸಕರು ಅಧಿಕಾರಿಗಳ ಸಭೆ ನಡೆದಿತ್ತು. ಆದರೆ, ನಮ್ಮನ್ನು ಕರೆದಿಲ್ಲ. ಈಗ ಸಮಸ್ಯೆಗಳು ಸೃಷ್ಟಿಯಾದಾಗ ಯಾರೂ ಇಲ್ಲ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ, ಜನಸಾಮಾನ್ಯರಿಗೂ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸಂಪೂರ್ಣ ವಿಫಲವಾಗಿದ್ದು, ತಕ್ಷಣ ಈ ಸಮಸ್ಯೆ ಬಗೆಹರಿಸಲಿ ಎಂದು ಖಾದರ್ ಒತ್ತಾಯಿಸಿದ್ದಾರೆ.