ದಕ್ಷಿಣ ಕನ್ನಡ (ಬಂಟ್ವಾಳ):ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾದಾಗ ದುಡಿಯಲು ಕೆಲಸವಿಲ್ಲದೆ ಕುಳಿತ ಜನರಿಗೆ ಉದ್ಯೋಗ ಖಾತರಿ ಯೋಜನೆಯ ಕುರಿತು ತಿಳುವಳಿಕೆ ಮೂಡಿಸಲಾಗಿತ್ತು. ಈ ಮೂಲಕ ತಮ್ಮ ಸ್ವಂತ ಜಮೀನಿನಲ್ಲಿ ಕುಡಿಯುವ ನೀರಿನ ತೆರೆದ ಬಾವಿ ಕೊರೆಯುವವರಿಗೆ ಯೋಜನೆಯಲ್ಲಿ ಅನುದಾನ ನೀಡುವುದಾಗಿ ಗ್ರಾಮ ಪಂಚಾಯತ್ ತಿಳಿಸಿತ್ತು.
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿನ ವ್ಯವಸ್ಥೆ ಇದ್ದರೂ ಕುಡಿಯುವ ನೀರಿನಲ್ಲಿ ಸ್ವಾವಲಂಬಿಗಳಾಗಲು ಬಹಳಷ್ಟು ಮಂದಿ ಮುಂದೆ ಬಂದಿದ್ದರು. ಪರಿಣಾಮ ತಮ್ಮ ಮನೆಗಳ ಬಳಿ ತೆರೆದ ಬಾವಿಗಳನ್ನು ತೋಡುವ ಕೆಲಸವನ್ನು ಆರಂಭಿಸಿದ್ದರು. ಮೂರನೇ ಹಂತದ ಲಾಕ್ಡೌನ್ ಮುಗಿಯುವ ಹೊತ್ತಿಗೆ 12 ಬಾವಿಗಳ ಕೆಲಸ ಪೂರ್ಣಗೊಂಡು ಇದೇ ಬಾವಿಯ ನೀರನ್ನು ಜನ ಕುಡಿಯಲು ಉಪಯೋಗಿಸುತ್ತಿದ್ದಾರೆ.