ಪುತ್ತೂರು:ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಪಕ್ಕದಲ್ಲೇ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಭಾರತ ಮಾತಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಫೆ.11ರಂದು ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ ಎಂದು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮತ್ತು ಶಾಸಕ ಸಂಜೀವ ಮಠಂದೂರು ಸೋಮವಾರ ನೂತನ ಮಂದಿರದಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸುಮಾರು 2.5 ಎಕರೆ ಜಾಗದಲ್ಲಿ ಅಮರಗಿರಿ ನಿರ್ಮಾಣ ಮಾಡಲಾಗಿದ್ದು, ಪ್ರಕೃತಿ ರಮಣೀಯ ಹುಲ್ಲುಹಾಸಿನ ಇಳಿಜಾರಿನ ಬುಡದಲ್ಲಿ ಸುಂದರ ಭಾರತ ಮಾತಾ ಮಂದಿರ ನಿರ್ಮಿಸಲಾಗಿದೆ. 3 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಸಾಕಷ್ಟು ದಾನಿಗಳು ಕೂಡ ನೆರವಾಗಿದ್ದಾರೆ. ಮಂದಿರದ ಪ್ರವೇಶ ದ್ವಾರದೆದುರಿನ ಅಂಗಳಕ್ಕೆ ಇಂಟರ್‍ಲಾಕ್ ಅಳವಡಿಸಲು ಶಾಸಕ ಸಂಜೀವ ಮಠಂದೂರು 20 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಅಚ್ಯುತ ಮೂಡೆತ್ತಾಯ ಹೇಳಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಷ್ಟ್ರಾಭಿಮಾನ ಮೂಡಿಸುವ ದೃಷ್ಠಿಯಿಂದ, ದೇಶಪೂಜನೆ ಕಲ್ಪನೆಯಲ್ಲಿ ಭಾರತ ಮಾತೆ ಮಂದಿರ ನಿರ್ಮಿಸಲಾಗಿದೆ. ಈ ಮಂದಿರದ ಮೂಲ ದೇಶದ ಪ್ರಜೆಗಳು ರಾಷ್ಟ್ರ ಭಕ್ತಿಯನ್ನು ಬೆಳೆಸುವುದಾಗಿದೆ. ಪುತ್ತೂರು ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಪಕ್ಕದಲ್ಲೇ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಭಾರತ ಮಾತಾ ಮಂದಿರವು ಅದ್ಭುತ ಕಲ್ಪನೆಯಾಗಿದೆ ಎಂದರು.
ಫೆ.11ರಂದು ಮಧ್ಯಾಹ್ನ 1.25ಕ್ಕೆ ಕಣ್ಣೂರು ಅಂತಾರಾಷ್ಡ್ರೀಯ ವಿಮಾನ ನಿಲ್ದಾಣದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಹೆಲಿಕಾಪ್ಟರ್ನಲ್ಲಿ ಆಗಮಿಸಲಿದ್ದು, ಮಧ್ಯನಾ 1.50ಕ್ಕೆ ಈಶ್ವರಮಂಗಲ ಗಜಾನನ ಶಾಲೆಯ ಮೈದಾನದಲ್ಲಿ ಇಳಿಯಲಿದ್ದಾರೆ. ಬಳಿಕ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಲಿದ್ದಾರೆ. ನಂತರ ಅಮರಗಿರಿಗೆ ಆಗಮಿಸಿ ದೀಪಪ್ರಜ್ವಲ ಮಾಡಿ, ಭಾರತ ಮಾತೆ ಪ್ರತಿಮೆ, ಅಮರ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಂದರ್ಶಕರ ಪುಸ್ತಕದಲ್ಲಿ ಅನಿಸಿಕೆ ಬರೆದು ಸಹಿ ಮಾಡಲಿದ್ದಾರೆ. ಇದಾದ ಬಳಿಕ ಸಂದೇಶ ನೀಡಿ ಪುತ್ತೂರಿಗೆ ನಿರ್ಗಮಿಸಲಿದ್ದಾರೆ ಎಂದು ತಿಳಿಸಿದರು.
ಭಾರತ ಮಾತೆಯ ಎರಡನೇ ಮಂದಿರ:ಕನ್ಯಾಕುಮಾರಿ ಬಿಟ್ಟರೆ ಭಾರತ ಮಾತೆಯ ಎರಡನೇ ಮಂದಿರ ಇದಾಗಿದೆ. ಇಲ್ಲಿ ಭಾರತ ಮಾತೆಯ ವಿಗ್ರಹ, ಜೈ ಜವಾನ್- ಜೈ ಕಿಸಾನ್ ಘೋಷಣೆಗೆ ಪೂರಕವಾಗಿ ಯೋಧ ಹಾಗೂ ರೈತನ ಪ್ರತಿಮೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಚಳವಳಿ ಮಾಡಿದ ವೀರರ ಚಿತ್ರಗಳು ಇವೆ. ಮಂದಿರದ ಹೊರಗೆ ಕಲ್ಲಿನಿಂದ ಮಾಡಿದ ಯೋಧನ ಕೈಯಲ್ಲಿ ತ್ರಿವರ್ಣ ರಾಷ್ಟ್ರಧ್ವಜ ಹಾರಾಡಲಿದೆ.
ಮಂದಿರದ ಸುತ್ತಲೂ ಹುಲ್ಲು ಹಾಸಿನ ಪ್ರಕೃತಿ ರಮಣೀಯ ತಾಣವಿದ್ದು, ಕಲ್ಲಿನ ಮೆಟ್ಟಿಲುಗಳಿವೆ. ಸುಂದ ಪ್ರವೇಶ ದ್ವಾರವಿದೆ. ಪ್ರತೀ ಶನಿವಾರ, ಭಾನುವಾರ ಅಮರಗಿರಿ ತೆರೆದಿರಲಿದ್ದು, ಪ್ರವಾಸಿಗರು ಆಗಮಿಸಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಎರಡು ದಿನ ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರವಿರುತ್ತದೆ. ಈ ವೇಳೆ ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಶರ್ಮ, ಕ್ಷೇತ್ರದ ಮುಖಂಡರಾದ ನಾಗರಾಜ ಭಟ್ ನಡುವಡ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.
ಇದನ್ನೂ ಓದಿ:ಸೇನೆಗೆ ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿ.. ಕಾರ್ಖಾನೆ ಉದ್ಘಾಟಿಸಿದ ಪ್ರಧಾನಿ ಮೋದಿ