ಮಂಗಳೂರು: ಬಿಜೈ ರಾಜ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿತು. ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶ ಹೊರಹಾಕಿದೆ.
ಪ್ರಕರಣದ ವಿವರ: 2012ರಲ್ಲಿ ಫಳ್ನೀರ್ ವೆಸ್ಟ್ ಗೇಟ್ ಟವರ್ಸ್ ಕಟ್ಟಡದ ನ್ಯಾಷನಲ್ ಮೆಡಿಕಲ್ ಸಮೀಪದ ಕಾಯಿನ್ ಬೂತ್ ಬಳಿ ರವಿ ಪೂಜಾರಿ ಸಂಚು ನಡೆಸಿ ಶೈಲೇಶ್ ರಾಜ ಯಾನೆ ಬಿಜೈ ರಾಜನನ್ನು ಕೊಲೆ ಮಾಡಿದ್ದನು. ಈ ಬಗ್ಗೆ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಮಂಗಳೂರಿನ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಘಟನೆಯ ವೇಳೆ ರವಿ ಪೂಜಾರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2021ರಲ್ಲಿ ಆತನನ್ನು ಸೆನೆಗಲ್‌ನಲ್ಲಿ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧ ದಾಖಲಾದ 2 ಪ್ರಕರಣಗಳಲ್ಲಿ ಪ್ರಿನ್ಸಿಪಾಲ್ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಒಂದು ಪ್ರಕರಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಪೂಜಾರಿಯನ್ನು ಖುಲಾಸೆಗೊಳಿಸಲಾಗಿದೆ.