ಮಂಗಳೂರು:ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏ.20 ಕೊನೆಯ ದಿನಾಂಕವಾಗಿದೆ. ಇನ್ನು ಕೇವಲ ಮೂರು ದಿನ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಆದರೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.
ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಡಾ.ವೈ ಭರತ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಭರತ್ ಶೆಟ್ಟಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಜಯಗಳಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲುಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಇನಾಯತ್ ಅಲಿ ನಡುವೆ ನೇರ ಪೈಪೋಟಿ ಇದೆ. ಇವರು ಇಬ್ಬರು ಹೈಕಮಾಂಡ್ನಲ್ಲಿ ಪ್ರಬಲ ಲಾಬಿ ನಡೆಸುತ್ತಿದ್ದು, ಟಿಕೆಟ್ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮೊಯ್ದಿನ್ ಬಾವ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೈ ಭರತ್ ಶೆಟ್ಟಿ ಅವರ ಎದುರು ಪರಾಭವಗೊಂಡಿದ್ದರು. ಇವರು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಬಿಜೆಪಿ ಆಡಳಿತದ ವಿರುದ್ಧ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. 2023ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕಳೆದ ಐದು ವರ್ಷಗಳಿಂದ ತಯಾರಿ ನಡೆಸಿದ್ದರು. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅವರು ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಉದ್ಯಮಿ ಬಿ.ಎಂ ಫಾರೂಕ್ ಅವರ ಸಹೋದರರಾಗಿದ್ದಾರೆ.