ಉಳ್ಳಾಲ : ನೇತ್ರಾವತಿ ನದಿಯ ರೈಲ್ವೆ ಸೇತುವೆ ಬಳಿ ಪರ್ಸ್, ಚಪ್ಪಲಿಗಳನ್ನು ಇಟ್ಟು ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಳ್ಳಾಲ ಕೋಟೆಪುರದ ಅಳಿವೆ ಬಾಗಿಲಿನಲ್ಲಿ ಪತ್ತೆಯಾಗಿದೆ.
ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ (21) ಮೃತ ಯುವಕ. ಹಫೀಝ್ ಆ. 20ರಿಂದ ಕಾಣೆಯಾಗಿದ್ದ. ನಿನ್ನೆ ಬೆಳಗ್ಗೆ ಆತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವು ಉಳ್ಳಾಲದ ಹೊಯ್ಗೆ ಬಳಿ ಪತ್ತೆಯಾಗಿತ್ತು. ರೈಲ್ವೆ ಸೇತುವೆಯಲ್ಲಿ ಪರ್ಸ್, ಚಪ್ಪಲಿಗಳು ಪತ್ತೆಯಾಗಿದ್ದವು. ಈ ಬಗ್ಗೆ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಮಂಗಳೂರಿನ ಧಕ್ಕೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ. ರಾತ್ರಿಯಾದರೂ ಮರಳಿ ಬಾರದ ಕಾರಣ ಮನೆಮಂದಿ ಹುಡುಕಾಟ ನಡೆಸಿದ್ದರು. ಶನಿವಾರ ಬೆಳಗ್ಗೆ ನೇತ್ರಾವತಿ ರೈಲ್ವೆ ಬ್ರಿಡ್ಜ್ ಬಳಿ ಹಫೀಝ್‌ನ ಮೊಬೈಲ್, ಚಪ್ಪಲಿ ಮತ್ತು ದ್ವಿಚಕ್ರ ವಾಹನ ಪತ್ತೆಯಾಗಿತ್ತು.
ಉಳ್ಳಾಲ ಪೊಲೀಸರು, ಅಗ್ನಿಶಾಮಕದಳ ಮತ್ತು ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿದ್ದರು. ಇದೀಗ ಹಫೀಝ್ ಮೃತದೇಹ ಇಂದು ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.