ಉಳ್ಳಾಲ:ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಸಮುದ್ರಕೊರೆತದಿಂದ ಉಚ್ಚಿಲ ಬೀಚ್ ರಸ್ತೆ ಸಂಪರ್ಕ ಸಮುದ್ರ ಪಾಲಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಮುದ್ರ ಬಿರುಸುಗೊಂಡಿದೆ. ನಿನ್ನೆ ಬೆಳಗ್ಗೆ ಅಪಾಯದ ಅಂಚಿನಲ್ಲಿದ್ದ ಉಚ್ಚಿಲ- ಬಟ್ಟಪ್ಪಾಡಿಯ ರಸ್ತೆಗೆ ಭಾರೀ ಗಾತ್ರದ ಅಲೆ ಬಡಿದು ರಸ್ತೆ ಮುಳುಗಿ ಹೋಗಿದೆ.
ಸಮುದ್ರ ತೀರದ ಭಾರೀ ಅಲೆಗಳಿಂದ ಅಪಾಯದಂಚಿನಲ್ಲಿದ್ದ ಸೋಮೇಶ್ವರ ಉಚ್ಚಿಲ-ಬಟ್ಟಪ್ಪಾಡಿಯ ರಸ್ತೆ ದುರಸ್ತಿ ಗೊಳಿಸಲಾಗಿತ್ತು. ಈಗ ರಸ್ತೆಯು ಸಂಪೂರ್ಣ ಸಮುದ್ರಪಾಲಾಗಿದೆ. ರಸ್ತೆ ಕಡಿತದಿಂದಾಗಿ ಊರಿನ ನಾಲ್ಕು ಮನೆಗಳಿಗೆ ಸಂಪರ್ಕ ಕಡಿತವಾಗಿದೆ.
ಉಳ್ಳಾಲದಲ್ಲಿ ತೀವ್ರ ಕಡಲ್ಕೊರೆತ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಸಮುದ್ರ ಬಿರುಸುಗೊಂಡಿದೆ. ಉಚ್ಚಿಲ, ಸೋಮೇಶ್ವರ, ಕೈಕೋ, ಕಿಲಿರಿಯಾನಗರ, ಮುಕ್ಕಚ್ಚೇರಿ ಭಾಗಗಳಲ್ಲಿ ಕಡಲ್ಕೊರೆತ ತಡೆಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ.