ಉಳ್ಳಾಲ: ಉಳ್ಳಾಲದಲ್ಲಿ ಪಬ್ಜಿ ಗೇಮ್ ವಿಚಾರವಾಗಿ ಕೊಲೆಯಾದ ಬಾಲಕ ಹಕೀಬ್ ಸ್ನೇಹಿತ ದೀಪಕ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಕೀಬ್ ಯಾವತ್ತೂ ಪಬ್ ಜಿ ಆಟದಲ್ಲಿ ಗೆಲ್ಲುತ್ತಿದ್ದ. ಆನ್ಲೈನ್ ಮೂಲಕ ಅನೇಕರನ್ನು ಸೋಲಿಸುತ್ತಲೇ ಇದ್ದ. ಇದರಿಂದ ಮೊಬೈಲ್ ಅಂಗಡಿಯಲ್ಲಿ ಪರಿಚಯಗೊಂಡಿದ್ದ ನೆರೆಮನೆಯ ನಿವಾಸಿ ದೀಪಕ್ ಜತೆಗೂ ಆಟಕ್ಕೆ ಮುಂದಾಗಿದ್ದ. ಆನ್ಲೈನ್ ಮೂಲಕ ಆಟವಾಡಿದ ಸಂದರ್ಭ ಹಕೀಬ್ ಗೆಲುವು ಸಾಧಿಸಿದಾಗ ಸಂಶಯ ವ್ಯಕ್ತಪಡಿಸಿದ ದೀಪಕ್, ನಿನ್ನ ಆಟ ಬೇರೆ ಯಾರೋ ಆಡುತ್ತಿದ್ದಾರೆ. ಹಾಗಾಗಿ ಎದುರು ಬದುರಾಗಿ ಕುಳಿತು ಆಡುವ ಎಂದು ಸವಾಲು ಹಾಕಿದ್ದ.
ಅದರಂತೆ ಶನಿವಾರ ಸಂಜೆ ಇಬ್ಬರೂ ಜೊತೆಯಾಗಿ ಆಟವಾಡಲು ಆರಂಭಿಸಿದ್ದರು. ಆದರೆ ಆಟದಲ್ಲಿ ಹಕೀಬ್ ಸೋತಿದ್ದಾನೆ. ಇದರಿಂದ ದೀಪಕ್- ಹಾಕೀಬ್ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಹಕೀಬ್ ಸಣ್ಣ ಕಲ್ಲೆಸೆದು ದೀಪಕ್ಗೆ ಮೊದಲಿಗೆ ಹಲ್ಲೆ ನಡೆಸಿದ್ದನು. ಇದರಿಂದ ರೊಚ್ಚಿಗೆದ್ದ ದೀಪಕ್ ದೊಡ್ಡ ಕಲ್ಲನ್ನೇ ಹಕೀಬ್ ಮೇಲೆ ಎತ್ತಿ ಹಾಕಿದಾಗ, ವಿಪರೀತ ರಕ್ತಸ್ರಾವ ಉಂಟಾದ ಹಕೀಬ್ ಸ್ಥಳದಲ್ಲೇ ಕುಸಿದುಬಿದ್ದಿದ್ದ.
ಘಟನಾ ಸ್ಥಳದಲ್ಲಿ ನಗರ ಪೊಲೀಸ್ ಕಮಿಷನರ್ ಪರಿಶೀಲನೆ ಗಾಬರಿಗೊಂಡ ದೀಪಕ್ ಆತನನ್ನು ಸಮೀಪದಲ್ಲೇ ಇದ್ದ ಕಂಪೌಂಡ್ ಪಕ್ಕಕ್ಕೆ ಕರೆದೊಯ್ದು ಬಾಳೆ ಎಲೆ, ತೆಂಗಿನಗರಿಗಳನ್ನು ಮುಚ್ಚಿ ಪರಾರಿಯಾಗಿದ್ದನು. ಇಂದು ಬೆಳಿಗ್ಗೆ ಸ್ಥಳೀಯರು ಹಕೀಬ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ದೀಪಕ್ನನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಕೃತ್ಯದ ವೇಳೆ ದೀಪಕ್ ಓರ್ವನೇ ಇದ್ದನೇ ಅಥವಾ ಇನ್ಯಾರಾದ್ರೂ ಇದ್ದರಾ ಅನ್ನುವ ಕುರಿತು ಸ್ಥಳೀಯ ಸಿಸಿಟಿವಿ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ ಸ್ಥಳಕ್ಕೆ ಕಮಿಷನರ್ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಮಕ್ಕಳು ಮೊಬೈಲ್ ಆಟದ ವಿಚಾರಕ್ಕೆ ಸಂಬಂಧಿಸಿ ಕೊಲೆಗೀಡಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡಿದಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಪಬ್ ಜಿ ಆಟ ಬ್ಯಾನ್ ಆದರೂ ಬೇರೆ ವರ್ಷನ್ಗಳನ್ನು ಮಕ್ಕಳು ಉಪಯೋಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ಹಿಂದೆಯೂ ವಿದ್ಯಾರ್ಥಿಯೋರ್ವ ಬ್ಲೂವೇಲ್ ಆಟಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯನ್ನು ನೆನಪಿಸಿಕೊಂಡರು.
ಇದನ್ನೂ ಓದಿ:ಉಳ್ಳಾಲದಲ್ಲಿ ಕೊಲೆಯಾದ ರೀತಿಯಲ್ಲಿ ಬಾಲಕನ ಶವ ಪತ್ತೆ; ಘಟನೆಗೆ PUBG ಗೇಮ್ ಕಾರಣ?