ಉಳ್ಳಾಲ(ದಕ್ಷಿಣಕನ್ನಡ): ಪಾವೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮದ ಶಾಲೆ, ಅಡ್ಡರಸ್ತೆಗಳ ಅಭಿವೃದ್ದಿಗೆ ಅನುದಾನ ಒದಗಿಸಲಾಗಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.
ಉಳ್ಳಾಲ: ಕಳ್ಳಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಯು.ಟಿ.ಖಾದರ್ - MLA UT Khader
ಉಳ್ಳಾಲ ತಾಲೂಕಿನ ಪಾವೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಹೊಂದುತ್ತಿರುವ ಪ್ರದೇಶ. ಪಾವೂರು ಗ್ರಾಮದಾದ್ಯಂತ 2.5 ಕೋಟಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.
8 ಲಕ್ಷ ರೂ. ಅನುದಾನದಡಿ ನಿರ್ಮಾಣವಾಗಲಿರುವ ಪಾವೂರು ಗ್ರಾಮದ ಕಳ್ಳಾಜೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾವೂರು ಗ್ರಾ.ಪಂ.ಅಭಿವೃದ್ದಿ ಹೊಂದುತ್ತಿರುವ ಪ್ರದೇಶ. ಪಾವೂರು ಗ್ರಾಮದಾದ್ಯಂತ 2.5 ಕೋಟಿ ಅನುದಾನದಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಡ್ಡರಸ್ತೆಗಳು ಸಂಪೂರ್ಣ ಅಭಿವೃದ್ದಿ ಹೊಂದಿದ್ದು, ಉಳಿದ ರಸ್ತೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಕಳ್ಳಾಜೆ ಪ್ರದೇಶದ ರಸ್ತೆ ದುರಸ್ತಿಪಡಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಜನಪ್ರತಿನಿಧಿಗಳು, ಅನುದಾನ ಮಂಜೂರು ಮಾಡಿದ್ದಾರೆ ಎಂದರು.
ಇದೇ ವೇಳೆ ಪಾವೂರು ಗ್ರಾಮದ ಗಾಡಿಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಅನುದಾನದಡಿ ನಿರ್ಮಾಣವಾಗುತ್ತಿರುವ ಕೊಠಡಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಖಾದರ್, 85 ವರ್ಷಗಳ ಹಿಂದಿನ ಹಳೆಯದಾದ ಈ ಶಾಲೆಯ ಅಭಿವೃದ್ದಿಯನ್ನು ಹಂತ-ಹಂತವಾಗಿ ಪೂರ್ಣಗೊಳಿಸಲಾಗುವುದು. ಗ್ರಾಮದ ಪೂಂಜ ಕುಟುಂಬಸ್ಥರು ನೀಡಿರುವ ಜಾಗದಲ್ಲಿ ಕೊಠಡಿ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಉದ್ದೇಶದಿಂದ ಶಾಲೆ ಅಭಿವೃದ್ದಿ ನಡೆಸಲಾಗುತ್ತಿದೆ ಎಂದರು.