ಬೆಳ್ತಂಗಡಿ(ದಕ್ಷಿಣ ಕನ್ನಡ):ಸ್ಕೆಚ್ ಪೆನ್ ಮೂಲಕ ಪೇಪರಿನಲ್ಲಿ ರಚಿಸಿದ ನಮ್ಮ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಎತ್ತಿ ಹಿಡಿದು 10 ಕಿಲೋ ಮೀಟರ್ ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಿ ಬಂದೆವು. ಈ ವೇಳೆ ಉಕ್ರೇನ್ ಸೈನಿಕರು ನಮಗೆ ಉತ್ತಮ ರೀತಿಯ ಬೆಂಬಲ ನೀಡಿದರು. ನಮ್ಮ ರಾಷ್ಟ್ರಧ್ವಜ ನಮ್ಮ ಜೀವವನ್ನು ಕಾಪಾಡಿದ ಕಾರಣ ಹುಟ್ಟೂರು ತಲುಪಲು ಸಾಧ್ಯವಾಯಿತು. ಇದು ಉಕ್ರೇನ್ನಲ್ಲಿ ಆತಂಕದ ಕ್ಷಣಗಳ ಜತೆ ಹರಸಾಹಸ ನಡೆಸಿ ಮನೆಯನ್ನು ಸೇರಿದ ಉಜಿರೆಯ ಟಿಬಿ ಕ್ರಾಸ್ ಸಮೀಪದ ಹೀನಾ ಫಾತಿಮಾ ಅವರ ಅಭಿಪ್ರಾಯ.
ಯುದ್ಧಪೀಡಿತ ಉಕ್ರೇನಿನ ಕಾರ್ಖೀವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಇವರು ಪೋಲೆಂಡ್ನಿಂದ ಹೊರಟು ಶನಿವಾರ ದೆಹಲಿಗೆ ಆಗಮಿಸಿ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಭಾನುವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿ 11ರ ಸುಮಾರಿಗೆ ಉಜಿರೆಯ ಮನೆಯನ್ನು ತಲುಪಿದರು.
ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ. ಅಧಿಕಾರಿಗಳ ಸ್ಪಂದನೆ ಅಭೂತಪೂರ್ವವಾಗಿತ್ತು. ಏಳು ದಿನ ಬಂಕರಿನಲ್ಲಿ ಕಾಲ ಕಳೆದಿದ್ದ ಏಳು ಜನ ಭಾರತೀಯರಾದ ಭೂಮಿಕಾ, ಅಕ್ಷಿತಾ ಅಭಿಷೇಕ್, ಆಕಾಶ್, ವೈಭವ ನಾಡಿಗ್, ಪ್ರಜ್ವಲ್ ಹಿಪ್ಪರಗಿ, ಮಂಜುನಾಥ ನಾನು ಸೇರಿಕೊಂಡು ಧೈರ್ಯದಿಂದ ಬಂಕರ್ ನಿಂದ ಬುಧವಾರ ಹೊರಬಂದೆವು.