ಮಂಗಳೂರು :ಉಜಿರೆಯ ಎಂಟು ವರ್ಷದ ಬಾಲಕ ಅನುಭವ್ನನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಸುಪಾರಿ ನೀಡಿದವನ ಶೋಧ ಕಾರ್ಯ ಮುಂದುವರಿದಿದೆ ಎಂದು ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 17 ರಂದು ಉಜಿರೆಯಲ್ಲಿವ ನಿವೃತ್ತ ನೌಕಾ ದಳದ ಉದ್ಯೋಗಿ ಎಕೆ ಶಿವನ್ ಅವರ ಮನೆಯ ಬಳಿಯಿಂದ ಅವರ ಮೊಮ್ಮಗನನ್ನು ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಲಾಗಿತ್ತು. ಇಂದು ಮುಂಜಾನೆ ಕೋಲಾರದಲ್ಲಿ ಪೊಲೀಸರು ಬಾಲಕನನ್ನು ರಕ್ಷಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದರು.
ಇದನ್ನೂ ಓದಿ : 3 ದಿನಗಳ ಬಳಿಕ ಮಡಿಲು ಸೇರಿದ ಮಗ: ಕರಾವಳಿಯಿಂದ ಬಯಲು ಸೀಮೆವರೆಗಿನ ಸೀಕ್ರೇಟ್ ಹೀಗಿತ್ತು..!
ಅಪಹರಣ ಮಾಡಿದ ಮಂಡ್ಯ ಜಿಲ್ಲೆಯ ದೇವಲಕೆರೆ ಗ್ರಾಮದ ರಂಜಿತ್ (22), ಮಂಡ್ಯ ಜಿಲ್ಲೆಯ ಕೋಡಿಕೆರೆ ಗ್ರಾಮದ ಹನುಮಂತು (21), ಮೈಸೂರು ಜಿಲ್ಲೆಯ ವಡಂತ ಹಳ್ಳಿ ಗ್ರಾಮದ ಗಂಗಾಧರ (25), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್ (22) ಮತ್ತು ಅಪಹರಿಸಿದ ಆರೋಪಿಗಳಿಗೆ ಆಶ್ರಯ ನೀಡಿದ ಕೋಲಾರ ಜಿಲ್ಲೆಯ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ (24) ಮತ್ತು ಮಹೇಶ್ (26) ಬಂಧಿತರು ಎಂದು ತಿಳಿಸಿದರು.
ಸುಪಾರಿ ನೀಡಿದವನ ಬಂಧನಕ್ಕೆ ಮುಂದುವರಿದ ಶೋಧ:
ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಕಿಡ್ನಾಪ್ ಮಾಡಲು ಸುಪಾರಿ ನೀಡಿದ ವ್ಯಕ್ತಿಯ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಈತ ಕಿಡ್ನಾಪ್ ಮಾಡಿದ ಆರೋಪಿಗಳಿಗೆ ಏಳು ಲಕ್ಷ ರೂ. ನೀಡುವುದಾಗಿ ಹೇಳಿ ಬಾಲಕನ ಅಪಹರಣ ಮಾಡಿಸಿದ್ದಾನೆ. ಆತ ಆರೋಪಿಗಳಿಗೆ ಒಂದು ದಿನದಲ್ಲಿ ಹಣ ಕೈಸೇರುವುದಾಗಿ ತಿಳಿಸಿದ್ದಾನೆ. ಕಿಡ್ನಾಪ್ ಮಾಡಿದ ಬಳಿಕ ಈತ ಬಾಲಕನ ತಾಯಿಗೆ ಫೋನ್ ಮಾಡಿ ಮತ್ತು ಬಾಲಕನ ತಂದೆಯ ವಾಟ್ಸ್ಆ್ಯಪ್ ಮೂಲಕ 100 ಬಿಟ್-ಕಾಯಿನ್(17 ಕೋಟಿ) ನಲ್ಲಿ ಹಣದ ಬೇಡಿಕೆ ಇರಿಸಿದ್ದ. ಆದರೆ, ಬಾಲಕನ ತಂದೆ ತನ್ನಲ್ಲಿ ಬಿಟ್- ಕಾಯಿನ್ ಇಲ್ಲ ಎಂದು ಹೇಳಿದಾಗ 60 ಬಿಟ್ ಕಾಯಿನ್ (10 ಕೋಟಿ) ಡಿಮ್ಯಾಂಡ್ ಮಾಡಿದ್ದನು.