ಉಡುಪಿ:ಶಾಲಾ- ಕಾಲೇಜುಗಳಲ್ಲಿ ಏಕ ರೀತಿಯ ಸಮವಸ್ತ್ರ ಬೇಕೇ? ಬೇಡವೇ? ಎಂಬ ಬಗ್ಗೆ ತೀರ್ಮಾನಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರಕ್ಕೆ ಬರಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರು ಹಿಜಬ್ (ಸ್ಕಾರ್ಫ್ ಮಾದರಿ ಬಟ್ಟೆ) ಧರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಒಂದು ವಾರದಿಂದ ತರಗತಿಗೆ ತೆರಳದೇ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ಹಿಜಬ್ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗುತ್ತಿದೆ. ಯಾರದ್ದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರು ಈ ರೀತಿ ಮಾಡುತ್ತಿದ್ದಾರೆ ಎಂದರು.
ಸರ್ಕಾರಿ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹಿಜಬ್ಗೆ ಒತ್ತಾಯ ಮಾಡುವವರು ಒಂದೂವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ. ಯೂನಿಫಾರ್ಮ್ ಬೇಕಾ ಬೇಡ್ವಾ ಎಂಬುದನ್ನು ಸರ್ಕಾರ ತೀರ್ಮಾನಿಸಲಿ.
ಪದವಿ ಪೂರ್ವ ಕಾಲೇಜು ಮಂಡಳಿಗೆ ಪತ್ರವನ್ನು ಬರೆದಿದ್ದೇವೆ. ಸಮವಸ್ತ್ರ ಬೇಡ ಎಂದರೆ ಯಾರಿಗೂ ಕಡ್ಡಾಯ ಮಾಡಬೇಡಿ. ಕೇಸರಿ ರುಮಾಲು, ಜೀನ್ಸ್, ಸ್ಲೀವ್ ಲೆಸ್ ಬಟ್ಟೆ ಹಾಕಿಕೊಂಡು ಬರಬಹುದೇ?. ತಮಗಿಷ್ಟದ ಬಟ್ಟೆಯನ್ನು ಹಾಕಿಕೊಂಡು ಬರಲು ಅವಕಾಶ ಇದೆಯೇ? ಸರ್ಕಾರ ಉಡುಪಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ತೀರ್ಮಾನಿಸಬೇಕು ಎಂದು ಅವರು ತಿಳಿಸಿದ್ದಾರೆ.