ಮಂಗಳೂರು: ಇಂದು ಜನರು ಧೈರ್ಯದಿಂದ ಬಂದು ಲಸಿಕೆ ಪಡೆಯುತ್ತಿಲ್ಲ. ಬದಲಾಗಿ ಏನಾದರೂ ಆಗುತ್ತದೆ ಎಂಬ ಭಯದಿಂದ ಲಸಿಕೆ ಪಡೆಯುವಂತೆ ಆಡಳಿತ ನಡೆಸುತ್ತಿರುವ ಸರ್ಕಾರ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬೇರೆಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕರು, ಸಚಿವರು ಮಾಡಿದರೆ, ಲಸಿಕೆ ನೀಡುವ ಕಾರ್ಯಕ್ರಮದ ಉದ್ಘಾಟನೆಯನ್ನು 'ಡಿ' ಗ್ರೂಪ್ ನೌಕರರಿಂದ ಮಾಡಿಸಲಾಗಿದೆ. ಮಂತ್ರಿಗಳು, ಶಾಸಕರು, ಪ್ರಧಾನಮಂತ್ರಿಗಳು, ವೈದ್ಯಕೀಯ ಕ್ಷೇತ್ರದ ನುರಿತರು ಲಸಿಕೆ ಮೊದಲೇ ಪಡೆದುಕೊಂಡಿದ್ದರೆ ಜನರು ಸಹ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದರು. ಲಸಿಕೆ ಪಡೆಯಲು ಜನರು ಹಿಂಜರಿಯಲು ಆಡಳಿತ ನಡೆಸುವ ಸರ್ಕಾರವೇ ಕಾರಣ ಎಂದು ಹೇಳಿದರು.
ಈಗ ರೋಗ ಬರೋದು ಬೇಡ ಎಂಬ ಕಾರಣಕ್ಕಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ ಈಗ ಲಸಿಕೆಯಿಲ್ಲ. 22 ದೇಶಗಳಲ್ಲಿ ಲಸಿಕೆ ತಯಾರಾಗುತ್ತಿದೆ. ಆದರೆ ಯಾರನ್ನೂ ಮಾರ್ಕೆಟಿಂಗ್ ಮಾಡಲು ದೇಶದೊಳಗೆ ಬರಲು ಬಿಜೆಪಿಗರು ಬಿಡಲಿಲ್ಲ. ನಮ್ಮ ದೇಶದಲ್ಲಿ ತಯಾರಾಗುವ ಲಸಿಕೆಯನ್ನು ಬೇರೆಡೆಗೆ ಕಳುಹಿಸಲಾಯಿತು. ಹಾಗಾಗಿ ಇದರ ಹೊಣೆಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹೊರಬೇಕು.