ಬಂಟ್ವಾಳ:ಕಾಂಗ್ರೆಸ್ ಪಕ್ಷ ಎಂದಿಗೂ ಗೂಂಡಾ ಪ್ರವೃತ್ತಿ ಮಾಡಿಲ್ಲ, ಮಾಡುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಕಾಂಗ್ರೆಸ್ ಆಡಳಿತ ಇದ್ದಾಗ ನಡೆಯದ ಘಟನೆ ಬಿಜೆಪಿ ಸರ್ಕಾರದ ಆಡಳಿತ ಇರುವಾಗ ನಡೆದಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ನಳಿನ್ ಕುಮಾರ್ ಕಟೀಲ್ಗೆ ಕನಸಿನಲ್ಲೂ ಕಾಂಗ್ರೆಸ್ ಹೆಸರು ಬರುತ್ತಿದೆ. ಯಾವುದೇ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷವನ್ನು ದೂರುವುದು ನಳಿನ್ಗೆ ಮಾಮೂಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ನೀಡುವ ಪ್ರತಿಯೊಂದು ಮತವೂ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿದೆ ಎಂದರು.
ಬಿಜೆಪಿ ಸರ್ಕಾರ ಕಳೆದ ಎರಡು ವರ್ಷದಲ್ಲಿ ಬಡವರಿಗೆ ಪ್ರಯೋಜಕಾರಿಯಾಗುವ ಯಾವುದೇ ಕಾರ್ಯಕ್ರಮ ತಂದಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹಲವು ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ರೇಷನ್ ಕಾರ್ಡ್ ವಿತರಣೆಯಾಗಿಲ್ಲ. ಮನೆ ಹಸ್ತಾಂತರ ಮಾಡಿಲ್ಲ. ಪಿಂಚಣಿ ಕೂಡ ಬಡವರಿಗೆ ದೊರೆಯುತ್ತಿಲ್ಲ. ಮರಾಠ ನಿಗಮ ಸ್ಥಾಪಿಸಲು ನಮ್ಮ ವಿರೋಧವಿಲ್ಲ. ಆದರೆ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದಾದ ಬಳಿಕ ನಿಗಮ, ಮಂಡಳಿ ಸ್ಥಾಪನೆ ಮಾಡಲಿ ಎಂದರು.
ಕೇಂದ್ರ ಸರ್ಕಾರದಿಂದ ಬ್ಯಾಂಕ್ಗಳ ವಿಲೀನವಾಗಿದೆ. ಪೆಟ್ರೋಲ್, ಅಡುಗೆ ಅನಿಲ ದರ, ದಿನಸಿ ಮೊದಲಾದ ದರಗಳು ಗಗನಕ್ಕೇರಿವೆ. ಕೃಷಿ ಮಸೂದೆ ಮೂಲಕ ದೇಶದ ಬೆನ್ನುಲುಬು ರೈತರನ್ನು ಬೀದಿಪಾಲು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಅದಾನಿ, ಅಂಬಾನಿ ಅವರ ಆಸ್ತಿ ಹೆಚ್ಚಳವಾಗಿದೆ. ಈಗಾಗಲೇ ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರಿಗೆ ಅಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣಗೊಂಡು ಮತ್ತೆ ನಮ್ಮ ಪಕ್ಷಕ್ಕೆ ಮರಳಲಿದ್ದಾರೆ ಎಂದರು.
ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಲೀಂ, ಗಿರೀಶ್ ಶೆಟ್ಟಿ, ಲತೀಫ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಇತರರು ಉಪಸ್ಥಿತರಿದ್ದರು.
ಓದಿ...ಕಾಂಗ್ರೆಸ್ ವಿಧಾನ ಪರಿಷತ್‌ನೊಳಗಡೆ ದಾಂಧಲೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೈದಿದೆ: ಕಟೀಲ್