ಮಂಗಳೂರು:ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನಿನ್ನೆ ಘೋಷಣೆ ಮಾಡಿದ ಪರಿಹಾರದಲ್ಲಿ ಕರ್ನಾಟಕಕ್ಕೆ ನಯಾಪೈಸೆಯನ್ನೂ ನೀಡಿಲ್ಲ. ಇದು ಕರ್ನಾಟಕ ಜನತೆಗೆ ಕೇಂದ್ರ ಸರ್ಕಾರ ಮಾಡಿದ ಅವಮಾನ. ಇದರ ಬಗ್ಗೆ ಧೈರ್ಯವಾಗಿ ಮಾತನಾಡಲಾಗದೆ 25 ಸಂಸದರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕರ್ನಾಟಕ ರಾಜ್ಯದಿಂದ 3 ಸಾವಿರ ಕೋಟಿ ಕೊಡಲಾಗಿದೆ. ಕರ್ನಾಟಕ ಜನತೆ 3 ಸಾವಿರ ಕೋಟಿ ಕೊಟ್ಟರು ಕೇಂದ್ರದಿಂದ ರಾಜ್ಯಕ್ಕೆ ನಯಾಪೈಸೆ ಬಿಡುಗಡೆಯಾಗಿಲ್ಲ. ಮೊದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದನ್ನು ಕೊರೊನಾ ಬರುವ ಮುಂಚೆಯೇ ಪ್ರಧಾನಮಂತ್ರಿಗಳ ಎದುರು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಣವನ್ನೂ ನೀಡಲಾಗಿಲ್ಲ. ಹೀಗಿದ್ದರೂ ಸಂಸದರು ಮಾತನಾಡಲು ಧೈರ್ಯವಿಲ್ಲದೆ ಕೂತಿದ್ದಾರೆ. ಆದ್ದರಿಂದ ರಾಜ್ಯದ 25 ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಕೊರೊನಾ ವಿಚಾರದಲ್ಲಿ ಮೊದಲಿನಿಂದಲೂ ರಾಜ್ಯದ ಜನತೆಯಲ್ಲಿ ಗೊಂದಲ ಮೂಡಿಸುತ್ತಿದೆ. ಸಚಿವರಾದ ರಾಮುಲು, ಡಾ. ಸುಧಾಕರ್ ನೀಡಬೇಕಾದ ಮಾಹಿತಿಯ ವಿಷಯವೇ ಗೊತ್ತಿಲ್ಲದ ಶಿಕ್ಷಣ ಸಚಿವರು ನೀಡುತ್ತಿದ್ದಾರೆ.
ಪರಿಹಾರ ಪ್ಯಾಕೇಜ್ ಘೋಷಣೆ ಬಗ್ಗೆ ಗೊಂದಲವಿದೆ. ಬೀಡಿ, ಟೈಲರ್, ಬಸ್ ಚಾಲಕ, ಕಂಡಕ್ಟರ್, ಗ್ಯಾರೇಜ್, ಫೋಟೋಗ್ರಾಫರ್ ಮೊದಲಾದವರಿಗೆ ಪರಿಹಾರ ಘೋಷಣೆ ಮಾಡಲಾಗಿಲ್ಲ. ₹1600 ಕೋಟಿ ಪರಿಹಾರ ಎಂದು ಹೇಳಿ ಅದರಲ್ಲಿ ಈ ಹಿಂದಿನ ಘೋಷಣೆಗೆ ಹಣ ನೀಡಿದ್ದಾರೆ ಎಂದು ಆಪಾದಿಸಿದರು.