ಮಂಗಳೂರು: ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿ, ನೆಲಹಾಸುಗಳ ಕಾಮಗಾರಿ 25 ಲಕ್ಷ ರೂ.ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಮೇಲ್ಛಾವಣಿಗೆ ಪೈಂಟ್, ವುಡನ್ ಫ್ಲೋರಿಂಗ್‌ಗೆ ಫಾಲಿಶ್ ಸೇರಿದಂತೆ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ ವಾರ್ಡ್‌ನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ ಸಂಕೀರ್ಣದಲ್ಲಿ ಸಂಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಕ್ರೀಡಾಳುಗಳು ಕಳೆದ ವರ್ಷ ನನ್ನನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಮನವಿ ನೀಡಿದ್ದರು. ಹಾಗಾಗಿ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಭಿವೃದ್ಧಿಪಡಿಸುವ ಕುರಿತು ಭರವಸೆ ನೀಡಿದ್ದೆ. ಇದೀಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.