ಮಂಗಳೂರು :ಅತಿವೇಗದಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಸರಣಿ ಅಪಘಾತ ಮಂಗಳೂರಿನ ಬಳ್ಳಾಲ್ ಭಾಗ್ನಲ್ಲಿ ಇಂದು ಮಧ್ಯಾಹ್ನ 1.20ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಓರ್ವ ಮಹಿಳೆ ಹಾಗೂ ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಾಲಕ ಶ್ರವಣ್ ಕುಮಾರ್ ಎಂಬಾತ ಅತಿವೇಗದಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದಿದ್ದು, ಮದ್ಯದ ಮತ್ತಿನಲ್ಲಿದ್ದನೆಂದು ಹೇಳಲಾಗುತ್ತಿದೆ. ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಮತ್ತೊಂದು ಕಡೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ ಪ್ರೀತಿ ಮನೋಜ್ (47) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಅಪಘಾತದ ಸಂದರ್ಭ ಮತ್ತೊಂದು ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಅಮಯ್ ಜಯದೇವನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.