ಬಂಟ್ವಾಳ:ಮೂರು ವರ್ಷಗಳ ಹಿಂದೆ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಯೊಬ್ಬ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದಾನೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ನವೀನ್ ಎಂಬಾತನೂ ದೂರು ನೀಡಿದ್ದು ತನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದಾಗಿ ಆಪಾದಿಸಿದ್ದಾನೆ.
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ಎಂಬಾತ ತುಂಬೆ ಆಸ್ಪತ್ರೆಗೆ ದಾಖಲಾಗಿದ್ದು, ಕಾರು, ಬೈಕಿನಲ್ಲಿ ಬಂದ ತಂಡ ಹಲ್ಲೆ ನಡೆಸಿದೆ ಎಂದು ಆಪಾದಿಸಿ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ ಘಟನೆ ಶುಕ್ರವಾರ ಮಧ್ಯಾಹ್ನದ ಬಳಿಕ ನಡೆದಿದೆ.
ಇದೇ ಪ್ರಕರಣಕ್ಕೆಸಂಬಂಧಿಸಿ ನವೀನ್ ಎಂಬಾತನೂ ದೂರು ನೀಡಿದ್ದು ತನ್ನ ಮೇಲೆ ಗುಂಪೊಂದು ಹಲ್ಲೆ ಮಾಡಿ ಥಳಿಸಿದ್ದಾಗಿ ಆಪಾದಿಸಿದ್ದಾನೆ. ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರದ ನಿವಾಸಿಯಾದ ಶರೀಫ್, ತಾನು ಮನೆಯಿಂದ ಮಸೀದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್, ಒಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ್ದಾಗಿ ಶರೀಫ್ ಆಪಾದಿಸಿದ್ದಾನೆ.
ಸ್ಥಳೀಯರೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆಂಬುಲೆನ್ಸ್ ತರುವ ಉದ್ದೇಶದಿಂದ ಬೈಕಿನಲ್ಲಿ ಸಾಗುತ್ತಿದ್ದ ನವೀನ್, ತನ್ನನ್ನು ತಡೆದ ಗುಂಪು ಹಲ್ಲೆ ನಡೆಸಿದ್ದಾಗಿ ದೂರಿದ್ದಾನೆ. ಘಟನೆಯಲ್ಲಿ ಗಾಯಗೊಂಡ ನವೀನ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎರಡೂ ದೂರುಗಳು ತಮಗೆ ಬಂದಿದ್ದು, ಇದರನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ.