ಕರ್ನಾಟಕ

karnataka

ETV Bharat / state

ರಾಷ್ಟ್ರಪತಿ ಪದಕ ಗೌರವಕ್ಕೆ ಕರಾವಳಿಯ ಇಬ್ಬರು ಅಧಿಕಾರಿಗಳು ಆಯ್ಕೆ - ರಾಷ್ಟ್ರಪತಿ ಪದಕ ಗೌರವ

73 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ ಗೌರವಕ್ಕೆ ನಗರದ ಅಗ್ನಿಶಾಮಕದಳದ ಮುಖ್ಯ ಅಧಿಕಾರಿ ಟಿ.ಎನ್.ಶಿವಶಂಕರ್ ಹಾಗೂ ನಗರದ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ)ನ ಹೆಡ್‌ ಕಾನ್​ಸ್ಟೇಬಲ್​ ಚಂದ್ರ ಕೆ. ಅಡೂರು ಆಯ್ಕೆಯಾಗಿದ್ದಾರೆ.

ಟಿ.ಎನ್.ಶಿವಶಂಕರ್,ಚಂದ್ರ ಕೆ.ಅಡೂರು

By

Published : Aug 15, 2019, 6:16 AM IST

ಮಂಗಳೂರು:ಸ್ವಾತಂತ್ರ್ಯೋತ್ಸವ ಅಂಗವಾಗಿ ಪುರಸ್ಕರಿಸಲಾಗುವ ರಾಷ್ಟ್ರಪತಿ ಪದಕ ಗೌರವಕ್ಕೆ ಮಂಗಳೂರು ವಲಯದ ಅಗ್ನಿಶಾಮಕದಳದ ಮುಖ್ಯ ಅಧಿಕಾರಿ ಟಿ.ಎನ್.ಶಿವಶಂಕರ್ ಹಾಗೂ ನಗರದ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ)ನ ಹೆಡ್‌ ಕಾನ್​ಸ್ಟೇಬಲ್​ ಚಂದ್ರ ಕೆ. ಅಡೂರು ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಪದಕ ಗೌರವಕ್ಕೆ ಆಯ್ಕೆಯಾಗಿರುವ ಅಧಿಕಾರಿಗಳ ವಿವರ:


*ಟಿ.ಎನ್.ಶಿವಶಂಕರ್ :
1993ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಬೆಂಗಳೂರಿನಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿಯಾಗಿ ವೃತ್ತಿ ಆರಂಭಿಸಿದರು. ನಂತರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಬಡ್ತಿ ಹೊಂದಿ ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯಾಗಿ ಬಡ್ತಿ ಹೊಂದಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಮೂರು ವರ್ಷಗಳಿಂದ ಮಂಗಳೂರು ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ 1996ರಲ್ಲಿ ಆಲ್ ಇಂಡಿಯಾ ವಾಟರ್‌ ಮೆನ್‌ಶಿಪ್ ಕೋರ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದು, 2005ರಲ್ಲಿ ಮುಖ್ಯಮಂತ್ರಿಯ ಕಂಚು ಪದಕ, 2010ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ, 2014ರಲ್ಲಿ ಮುಖ್ಯಮಂತ್ರಿಯ ಶ್ಲಾಘನೀಯ ಪದಕ ಪಡೆದಿದ್ದಾರೆ. ತಮ್ಮ ಸೇವಾವಧಿಯಲ್ಲಿ ಒಟ್ಟು 27 ಬಾರಿ ನಗದು ಸಹಿತ ಪ್ರಶಸ್ತಿ ಪದಕಗಳನ್ನು ಬಾಚಿ ಕೊಂಡಿದ್ದಾರೆ.

2018ರಲ್ಲಿ ಕೊಡಗಿನ ಜೋಡುಪಾಲದಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿ 450ಕ್ಕೂ ಹೆಚ್ಚು ಸಂತ್ರಸ್ತರನ್ನು ರಕ್ಷಣೆ ಮಾಡಿದ್ದರು. 2011ರಲ್ಲಿ ಲಂಡನ್‌ನಲ್ಲಿ ಅರ್ಬನ್ ಸರ್ಚ್ ಆ್ಯಂಡ್ ರೆಸ್ಕೂ ಕೋರ್ಸ್‌ನಲ್ಲಿ ತರಬೇತಿ ಪಡೆದು ಬೆಂಗಳೂರಿನ ಅಗ್ನಿಶಾಮಕ ಅಕಾಡಮಿಯಲ್ಲಿ ದೇಶದ ವಿವಿಧೆಡೆಯ 200ಕ್ಕೂ ಹೆಚ್ಚು ಅಗ್ನಿಶಾಮಕ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.

*ಚಂದ್ರ ಕೆ.ಅಡೂರು:
1996ರಲ್ಲಿ ಪೊಲೀಸ್ ಇಲಾಖೆಗೆ ಕಾನ್​ಸ್ಟೇಬಲ್ ಆಗಿ ಸೇರ್ಪಡೆಗೊಂಡು ಮಂಗಳೂರಿನ ಪಾಂಡೇಶ್ವರ, ಉಳ್ಳಾಲ, ಡಿಸಿಐಬಿ ಠಾಣೆಗಳಲ್ಲಿ ಹಾಗೂ 2014ರಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಬಡ್ತಿ ಹೊಂದಿದ ಬಳಿಕ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮತ್ತು ಈಗ ಸಿಸಿಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭೂಗತ ಪಾತಕಿಗಳು ಮತ್ತು ರೌಡಿಗಳು ಸೇರಿದಂತೆ ವಿವಿಧ ಆರೋಪಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ತಿಳುವಳಿಕೆ ಹೊಂದಿರುವ ಚಂದ್ರ ಕೆ. ಅವರ ಸಹಾಯದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಅನೇಕ ಮಂದಿ ಕ್ರಿಮಿನಲ್‌ಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ 2010ರಲ್ಲಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದರು. ತಮ್ಮ ಸೇವಾವಧಿಯಲ್ಲಿ 33,000 ರೂ.ಗಳಿಗಿಂತಲೂ ಅಧಿಕ ನಗದು ಬಹುಮಾನ, 10 ಪ್ರಶಂಸಾ ಪತ್ರ ಹಾಗೂ 40 ಉತ್ತಮ ಸೇವಾ ಪುರಸ್ಕಾರಗಳನ್ನು ಗಳಿಸಿದ್ದಾರೆ.

ABOUT THE AUTHOR

...view details