ಮಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ದ ಘೋಷಣೆ ಆಗಿರುವ ಹಿನ್ನೆಲೆ ಆತಂಕ ಮನೆಮಾಡಿದ್ದು, ನಗರದ ಎರಡು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ದೇರೆಬೈಲ್ ನಿವಾಸಿ ಅನೈನಾ ಅನ್ನಾ ಎಂಬ ವಿದ್ಯಾರ್ಥಿನಿ ಮತ್ತು ಪಡೀಲ್ ನಿವಾಸಿ ಕ್ಲಾಟನ್ ಎಂಬ ವಿದ್ಯಾರ್ಥಿ ಉಕ್ರೇನ್ ನಲ್ಲಿ ಇರುವ ಮಂಗಳೂರು ಮೂಲದ ವಿದ್ಯಾರ್ಥಿಗಳು. ಅನೈನಾ ಅನ್ನಾ ಅವರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಉಕ್ರೇನ್ ನ ಗಡಿ ಭಾಗವಾದ ಖಾರ್ಕಿವ್ ನಗರದಲ್ಲಿ ನೆಲೆಸಿದ್ದಾರೆ.
ಇವರು ಮಂಗಳೂರಿನಲ್ಲಿರುವ ತಾಯಿ ಸುಜಾತ ಜೊತೆಗೆ ಮಾತನಾಡಿದ್ದು, ಸದ್ಯ ಸುರಕ್ಷಿತ ಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಕ್ಲಾಟನ್ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮನೆಯವರನ್ನು ಸಂಪರ್ಕಿಸಿ ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ನೆರವಿಗಾಗಿ ಕರೆ ಮಾಡಲು ಜಿಲ್ಲಾಧಿಕಾರಿ ಮನವಿ:ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿಕೊಂಡಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ನಂಬರ್ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ತಿಳಿಸಿದ್ದಾರೆ. ಜಿಲ್ಲೆಯ ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿಕೊಂಡಲ್ಲಿ ಅವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ನೆರವು ಅಗತ್ಯವಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.