ಕರ್ನಾಟಕ

karnataka

ETV Bharat / state

ಜಾದೂಗಾರ ಕುದ್ರೋಳಿ ಗಣೇಶ್​​ಗೆ ಎರಡು ಅಂತಾರಾಷ್ಟ್ರೀಯ ಪುರಸ್ಕಾರ - ಈಟಿವಿ ಭಾರತ ಕನ್ನಡ

ಥೈಲ್ಯಾಂಡಿನ ಬ್ಯಾಂಕಾಕ್​ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜಾದೂ ಸಮ್ಮೇಳನದಲ್ಲಿ ಕುದ್ರೋಳಿ ಗಣೇಶ್​ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ "ಮರ್ಲಿನ್ ಮೆಡಲ್ " ಪ್ರಶಸ್ತಿ ಹಾಗೂ "ಮೋಸ್ಟ್ ಓರಿಜಿನಲ್ ಆಕ್ಟ್" ಪ್ರಶಸ್ತಿ ಲಭಿಸಿದೆ.

two-international-awards-for-magician-kudroli-ganesh
ಜಾದೂಗಾರ ಕುದ್ರೋಳಿ ಗಣೇಶ್​​ಗೆ ಎರಡು ಅಂತಾರಾಷ್ಟ್ರೀಯ ಪುರಸ್ಕಾರ

By

Published : Dec 24, 2022, 8:45 PM IST

ಮಂಗಳೂರು :ಥೈಲ್ಯಾಂಡಿನ ಬ್ಯಾಂಕಾಕ್​ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜಾದೂ ಸಮ್ಮೇಳನದಲ್ಲಿ ಮಂಗಳೂರಿನ ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ಎರಡು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸಿವೆ. ಕುದ್ರೋಳಿ ಗಣೇಶ್ ಅವರು ಪ್ರಸುತ ಪಡಿಸಿದ " ತುಳುನಾಡು ತುಡರ್ ಚೆಂಡು" ಜಾದೂವಿಗೆ ಈ ಪುರಸ್ಕಾರ ಲಭಿಸಿದೆ.

ಜಗತ್ತಿನ ಅತ್ಯಂತ ಪುರಾತನ ಜಾದೂ ಆಗಿರುವ ಕಪ್ಸ್ ಆ್ಯಂಡ್ ಬಾಲ್ಸ್ ಮ್ಯಾಜಿಕ್ ಅನ್ನು ಕುದ್ರೋಳಿ ಗಣೇಶ್ ಅವರು ನೂತನ ತಂತ್ರಗಾರಿಕೆಯ ಮೂಲಕ ತುಳು ಭಾಷೆ ಹಾಗೂ ಪಾಡ್ದನದ ಮೂಲಕ ಪ್ರಸ್ತುತ ಪಡಿಸಿದ್ದರು. ಇವರ ಸೃಜನಶೀಲತೆಯನ್ನು ಪರಿಗಣಿಸಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಬೃಹತ್ ಜಾದೂ ಸಂಸ್ಥೆ ಅನ್ನುವ ಹೆಗ್ಗಳಿಕೆ ಹೊಂದಿದ ಅಮೆರಿಕದ ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯು ಪ್ರತಿಷ್ಠಿತ "ಮರ್ಲಿನ್ ಮೆಡಲ್ " ಪ್ರಶಸ್ತಿ ನೀಡಿ ಗೌರವಿಸಿದೆ.

ಮೋಸ್ಟ್ ಓರಿಜಿನಲ್ ಆ್ಯಕ್ಟ್ ಪ್ರಶಸ್ತಿ :ತುಳುನಾಡು ತುಡರ್ ಚೆಂಡು ಜಾದೂವಿನ ಹೊಸತನವನ್ನು ಗಮನಿಸಿ ವಿಶ್ವ ಜಾದೂ ಸಮ್ಮೇಳನ ಸಂಘಟಿಸಿದ ಥೈಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ " ಮೋಸ್ಟ್ ಓರಿಜಿನಲ್ ಆಕ್ಟ್ " ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಅಮೆರಿಕಾದ ಜಾದೂಗಾರ ಟೋನಿ ಹಸೀನಿ ಹಾಗೂ ಉಕ್ರೇನಿನ ಜಾದೂಗಾರ ವೊರೋನಿನ್ ರವರು ಕುದ್ರೋಳಿ ಗಣೇಶ್ ರವರಿಗೆ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಥೈಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ ಅಧ್ಯಕ್ಷರಾದ ಜಾದೂಗಾರ ಮಮದಾ ಹಾಗೂ ಭಾರತದ ದಿಲ್ಲಿ ಸ್ಕೂಲ್ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಜಾದೂಗಾರ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಾಂಗ್ ಕಾಂಗ್ ಜಾದೂಗಾರರಾದ ಅಲ್ಬರ್ಟ್ ಟಾಮ್ ಮತ್ತು ಬಾಂಡ್ ಲೀ, ಇಂಡೋನೇಷ್ಯಾದ ಜಾದೂಗಾರ ಹ್ಯಾಂಡಿ, ಸಿಂಗಾಪುರದ ಜಾದೂಗಾರ ಕಸ್ಸಿಡಿ ಲೀ ಮೊದಲಾದವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಬ್ಯಾಂಕಾಕ್ ನ ಫ್ಯಾಶನ್ ಐಲ್ಯಾಂಡ್ ಮಾಲ್ ನಲ್ಲಿ ನಡೆದ 5 ದಿನಗಳ ವಿಶ್ವ ಜಾದೂ ಸಮ್ಮೇಳನದಲ್ಲಿ ಜಗತ್ತಿನ ಹತ್ತಕ್ಕೂ ಹೆಚ್ಚು ದೇಶಗಳ ನೂರಾರು ಜಾದೂಗಾರರು ಭಾಗವಹಿಸಿದ್ದರು.

ಇದನ್ನೂ ಓದಿ :ಮ್ಯಾಜಿಕ್ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಜಾದೂಗಾರ ಕುದ್ರೋಳಿ ಗಣೇಶ್​​​​

ABOUT THE AUTHOR

...view details