ಮಂಗಳೂರು:ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಕೊಲೆ ಕೃತ್ಯವನ್ನು ವಿಜೃಂಭಿಸುವ ರೀತಿಯಲ್ಲಿ ಪ್ರಚೋದನಕಾರಿ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಎಂಬ ಫೇಸ್ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿರುವ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಮುಲ್ಕಿ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಮಂಗಳೂರು ಮುಸ್ಲಿಂ ಖಾತೆಯ ತನಿಖೆ ಮುಂದುವರೆದಿದೆ. ಈ ಬಗ್ಗೆ ಈಗಾಗಲೇ ಫೇಸ್ಬುಕ್ಗೆ ನೋಟಿಸ್ ನೀಡಲಾಗಿದ್ದು, ಅಲ್ಲಿಂದ ಯಾರೂ ಈ ಗ್ರೂಪ್ ಎಂಬ ಮಾಹಿತಿ ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಫೇಸ್ಬುಕ್ ಖಾತೆಯ ವಿರುದ್ಧ ಈಗಾಗಲೇ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಖಾತೆಯಲ್ಲಿ 2016ರಲ್ಲಿ ಕಟೀಲು ಶ್ರೀದೇವಿ ಹಾಗೂ ಸೀತಾ ಮಾತೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಈ ಮಂಗಳೂರು ಮುಸ್ಲಿಂ ಖಾತೆಯನ್ನು ಬ್ಲಾಕ್ ಮಾಡಲು ಫೇಸ್ಬುಕ್ ಗೆ ಮನವಿ ಮಾಡಲಾಗಿತ್ತು. ಅದರಂತೆ ಖಾತೆ ಬ್ಲಾಕ್ ಆಗಿತ್ತು. ಇದೀಗ ಮತ್ತೆ ಸ್ಪೆಲ್ಲಿಂಗ್ ಅಲ್ಲಿ ವ್ಯತ್ಯಾಸ ಮಾಡಿ ಖಾತೆಯನ್ನು ಮತ್ತೆ ಮರು ತೆರೆಯಲಾಗಿದೆ ಎಂದು ತಿಳಿದು ಬಂದಿದೆ.
ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ:ಇನ್ನೊಂದು ಪ್ರಕರಣದಲ್ಲಿ ಕೊಣಾಜೆ ಮಂಗಳೂರು ವಿವಿಯ ಮುಖ್ಯ ದ್ವಾರದಲ್ಲಿ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳಾದ ಅಮೀರ್(39), ಮಹಮ್ಮದ್ ಫರ್ವಿಜ್(40), ಮಹಮ್ಮದ್ ಅನ್ನಿಫ್(36) ಬಂಧಿತ ಆರೋಪಿಗಳಾಗಿದ್ದಾರೆ.