ಕರ್ನಾಟಕ

karnataka

ETV Bharat / state

ಭವಿಷ್ಯ ನುಡಿಯುವ ನೆಪದಲ್ಲಿ ಬಂದು ಮನೆಕಳ್ಳತನ: ಇಬ್ಬರ ಬಂಧನ - theft in home in the name of Astrology

ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಪಂಜದಿಂದ ಮಗುವೊಂದನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ವದಂತಿಯಿಂದ ಕೆಲಕಾಲ ಕಡಬ ಮತ್ತು ಪಂಜ ಪೇಟೆಯಲ್ಲಿ ಆತಂಕ ಸೃಷ್ಠಿಯಾದ ಘಟನೆ ಶುಕ್ರವಾರದಂದು ಸಂಭವಿಸಿದೆ.

ಭವಿಷ್ಯ ನುಡಿಯುವ ನೆಪದಲ್ಲಿ ಬಂದು ಮನೆಕಳ್ಳತನ: ಇಬ್ಬರ ಬಂಧನ

By

Published : Oct 12, 2019, 4:51 AM IST

ಮಂಗಳೂರು/ಕಡಬ:ಇಬ್ಬರು ವ್ಯಕ್ತಿಗಳು ಭವಿಷ್ಯ ಹೇಳುವ ನೆಪದಲ್ಲಿ ಪಂಜ ಪೇಟೆಯಿಂದ ಮಗುವನ್ನು ಅಪಹರಿಸಿ ಸರಕಾರಿ ಬಸ್ಸಿನ ಮೂಲಕ ಕಡಬಕ್ಕೆ ಬಂದು ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿಯೊಂದು ಶುಕ್ರವಾರ ಅಪರಾಹ್ನದಿಂದಲೇ ಕಡಬದಲ್ಲಿ ಹಬ್ಬಿದೆ.

ಹೀಗಾಗಿ ಸಾರ್ವಜನಿಕರು ಹುಡುಕಾಡಿದಾಗ ಕಡಬದಿಂದ ಖಾವಿಧಾರಿಗಳಿಬ್ಬರು ಬಸ್ಸಿನಲ್ಲಿ ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣ ಆಲಂಕಾರಿನ ಯುವಕರಿಗೆ ವಿಷಯ ತಿಳಿಸಲಾಗಿದ್ದು, ಬಸ್ಸನ್ನು ತಡೆದು ತನಿಖೆ ನಡೆಸುವಂತೆ ಸೂಚಿಸಲಾಯಿತು. ಇದೇ ವೇಳೆ ಅಲಂಕಾರು ಪೇಟೆಯಲ್ಲಿ ಆಗಮಿಸಿದ ಯುವಕರು ಬಸ್ಸಿನಲ್ಲಿ ಎಲ್ಲಾ ಸೀಟುಗಳ ಪ್ರಯಾಣಿಕರನ್ನು ಜಾಲಾಡಿದರು. ಈ ವೇಳೆ ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಬಸ್ಸಿನಲ್ಲಿರುವುದು ಗಮನಕ್ಕೆ ಬಂದು ಆ ಇಬ್ಬರನ್ನು ಕೆಳಗಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಡಬ ಠಾಣೆಯ ಹೋಮ್‍ಗಾರ್ಡ್ ಸಿಬ್ಬಂದಿಯೋರ್ವರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ, ನಾವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಕಪ್ಪನಕೊಪ್ಪಲು ಮೂಲದ ಸುಡುಗಾಡು ಸತೀಶ್(32) ಹಾಗೂ ಪ್ರದೀಪ್(27) ಎಂದು ಪರಿಚಯಿಸಿಕೊಂಡಿದ್ದಾರೆ. ನಾವು ಬೆಳಗ್ಗೆ ಬೆಳ್ಳಾರೆಯಿಂದ ಕಡಬ ತನಕ ಮನೆ ಮನೆ ತೆರಳಿ ಭವಿಷ್ಯ ಹೇಳಿದ್ದೇವೆ. ಮಧ್ಯಾಹ್ನ ಕಡಬ ಪೇಟೆಯಿಂದ ಉಪ್ಪಿನಂಗಡಿಗೆ ತೆರಳಲು ಪ್ರಯಾಣ ಬೆಳೆಸಿದ್ದೇವೆ ಎಂಬ ಮಾಹಿತಿ ನೀಡಿದರು.

ಇತ್ತ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಮಗು ಅಪಹರಣವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಇದೊಂದು ಸುಳ್ಳು ವದಂತಿ ಎಂದು ತಿಳಿದು ಖಾವಿಧಾರಿ ಸನ್ಯಾಸಿಗಳಿಗೆ ಸ್ಥಳೀಯರು ಪ್ರಯಾಣ ಮುಂದುವರಿಸಲು ಸೂಚಿಸಿದ್ದಾರೆ. ಆದರೆ ಬಳಿಕ ಬಂದ ಮಾಹಿತಿಯಂತೆ ಇವರಿಬ್ಬರು ಕಳ್ಳರಾಗಿದ್ದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ ಮನೆಯೊಂದರಿಂದ ಬೆಳೆ ಬಾಳುವ ಮೊಬೈಲ್, ಬಂಗಾರ ಹಾಗೂ ಹಣವನ್ನು ಕಳವುಗೈದು ಪರಾರಿಯಾಗುತ್ತಿದ್ದು, ಇವರ ತಂಡದಲ್ಲಿದ್ದ ಓರ್ವನನ್ನು ಸಂಪ್ಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಳಿಕ ಆಲಂಕಾರಿನಲ್ಲಿ ಇಬ್ಬರನ್ನು ಸಾರ್ವಜನಿಕರು ವಶಕ್ಕೆ ಪಡೆದುಕೊಂಡು ನಿಲ್ಲಿಸಿದ್ದಾರೆ ಎಂಬ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪುತ್ತೂರು ಸಂಪ್ಯ ಠಾಣೆಯ ಸಿಬ್ಬಂದಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿ ಓರ್ವನನ್ನು ಈಗಾಗಲೇ ವಶಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಆರೋಪಿಗಳ ಪೋಟೋವನ್ನು ಪರಿಶೀಲಿಸಿ ಬೆಳ್ಳಾರೆಯಲ್ಲಿ ಕಳ್ಳತನಗೈದ ಕಳ್ಳರಲ್ಲಿ ಒಬ್ಬನು ಈ ತಂಡದಲ್ಲಿದ್ದಾನೆ ಎಂದು ಸ್ಪಷ್ಟಪಡಿಸಿದರು. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳನ್ನು ಉಪ್ಪಿನಂಗಡಿ ಬಸ್ ತಂಗುದಾಣದಲ್ಲಿ ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details