ಸುಳ್ಯ(ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆಯಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯು ಪ್ರಗತಿಯಲ್ಲಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಝಕೀರ್ ಮತ್ತು ಮಹಮ್ಮದ್ ಶಫಿಕ್ ಎಂಬುವರನ್ನು ಬಂಧಿಸಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಶಫಿಕ್ ಬೆಳ್ಳಾರೆ ಮತ್ತು ಝಕೀರ್ ಸವಣೂರು ನಿವಾಸಿ ಎನ್ನಲಾಗ್ತಿದೆ. ಝಕೀರ್ ಮೇಲೆ ಈ ಹಿಂದೆ ಒಂದು ಕ್ರಿಮಿನಲ್ ಕೇಸ್ ಇದೆ. ಈ ಇಬ್ಬರ ಸಂಘಟನೆ ಹಿನ್ನೆಲೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆಗೆ ಸ್ಪಷ್ಟ ಕಾರಣ ಹಾಗೂ ಇನ್ನೂ ಯಾರಾದರೂ ಇದ್ದಾರಾ ಎಂಬ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಇಬ್ಬರು ಆರೋಪಿಗಳ ಬಂಧನ ಇದೇ ವೇಳೆ ಮಾತನಾಡಿದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹತ್ಯೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಿಎಂ ಭೇಟಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ 3:30ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲಿದ್ದಾರೆ. ನಂತರ ಸುಳ್ಯದ ಬೆಳ್ಳಾರೆಯಲ್ಲಿನ ಪ್ರವೀಣ್ ನಿವಾಸಕ್ಕೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಐಜಿಪಿ ಪ್ರವೀಣ್ ಸೂದ್ ಸಭೆಯಲ್ಲಿ ಉಪಸ್ಥಿತರಿದ್ದು, ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ, ಎಷ್ಟು ಜನ ಬಂಧನವಾಗಿದೆ ಎನ್ನುವುದು ಸೇರಿದಂತೆ ಎಲ್ಲಾ ಮಾಹಿತಿ ಪಡೆದರು.
ಅಧಿಕಾರಗಳ ಜೊತೆ ಸಭೆ ಬಳಿಕ ಮಂಗಳೂರು ಭೇಟಿ ಕುರಿತು ತೀರ್ಮಾನ ಮಾಡ್ತೀನಿ ಎಂದಿದ್ದ ಸಿಎಂ, ಅದರಂತೆ ಸ್ಥಳೀಯ ಸ್ಥಿತಿಗತಿ ಮಾಹಿತಿ ಪಡೆದು ಮಂಗಳೂರು ಪ್ರವಾಸಕ್ಕೆ ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನ 3.30 ರ ವಿಮಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಇಬ್ಬರು ಮಂಗಳೂರು ತೆರಳಲಿದ್ದಾರೆ.
ಇದನ್ನೂ ಓದಿ:ಪ್ರವೀಣ್ ಹತ್ಯೆ ಹಿನ್ನೆಲೆ ಆತ್ಮಸಾಕ್ಷಿ ಮೂಲಕ ಜನೋತ್ಸವ ಸಮಾರಂಭ ರದ್ದು: ಸಿಎಂ ಬೊಮ್ಮಾಯಿ