ಬೆಳ್ಳಾರೆ(ದಕ್ಷಿಣ ಕನ್ನಡ):ಬೆಡ್ ಶೀಟ್, ಕಂಬಳಿ ಮಾರಾಟಕ್ಕೆ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಪ್ರಕರಣ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಂಗಳೂರಿನ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ಆರೋಪಿಗಳ ತಮ್ಮ ಮೇಲೆ ಗುಂಪೊಂದು ವಿನಃ ಕಾರಣ ಹಲ್ಲೆ ನಡೆಸಿದೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಏನಿದು ಘಟನೆ?:ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಮನೆಯೊಂದಕ್ಕೆ ಬೆಡ್ ಶೀಟ್ ಮಾರಾಟಕ್ಕೆ ಕಾರಿನಲ್ಲಿ ಬಂದಿದ್ದ ಮಂಗಳೂರಿನ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮೀಝುದ್ದೀನ್ ಎಂಬುವರು ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದಾರೆ. ಮಹಿಳೆ ವಿರೋಧಿಸಿದಾಗ ಮೈ, ಕೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಮಹಿಳೆ ಬೊಬ್ಬೆ ಹಾಕಿದಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳೆ ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಈ ಆರೋಪಿಗಳು, ಕಾರು ಪಲ್ಟಿಯಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ ಎಂದು ವರದಿಯಾಗಿತ್ತು.