ಕರ್ನಾಟಕ

karnataka

ETV Bharat / state

ಮಾತೃಭಾಷೆ ಮರೆತರೆ ನಮ್ಮ ಮೂಲವನ್ನೇ ಮರೆತಂತೆ: ಡಿ.ವಿ.ಸದಾನಂದ ಗೌಡ

ಭಾಷೆಯೊಂದು ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿಯಿಂದ ದೇಶದ ಸಂಸ್ಕೃತಿಯೇ ಅವನತಿಯತ್ತ ಸಾಗುತ್ತದೆ‌ ಎಂದು ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

Mangalore
ಮಂಗಳೂರು

By

Published : May 31, 2021, 12:17 PM IST

ಮಂಗಳೂರು:ಜಾಗತೀಕರಣದ ಪ್ರಭಾವದಿಂದ ಇಂಗ್ಲಿಷ್‌ ಅನಿವಾರ್ಯ ಎಂಬಂತಾಗಿದೆ. ಪರಿಣಾಮ ತುಳು ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳು ನಲುಗುತ್ತಿವೆ. ಆದ್ದರಿಂದ ಮಾತೃ ಭಾಷೆಯನ್ನು ಮರೆತು ಮೂಲವನ್ನೇ ಮರೆಯದಿರೋಣ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ ಆನ್‌ಲೈನ್‌ ವೇದಿಕೆಯಲ್ಲಿ ನಡೆದ 52ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು.

ಭಾಷೆಯೊಂದು ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿಯಿಂದ ದೇಶದ ಸಂಸ್ಕೃತಿಯೇ ಅವನತಿಯತ್ತ ಸಾಗುತ್ತದೆ‌ ಎಂದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಖಂಡಿತಾ ಪ್ರಯತ್ನ ಮಾಡುವೆ ಎಂಬ ಭರವಸೆ ನೀಡಿದ‌ ಸಚಿವರು, ರಾಜ್ಯ ಸರ್ಕಾರ ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಗುರುತಿಸಿದಲ್ಲಿ ವ್ಯವಸ್ಥೆಯೊಳಗೆ ಭಾಷೆ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಕನ್ನಡ ಮಾಧ್ಯಮಕ್ಕೆ ತುಳು ಭಾಷಿಗರ ಕೊಡುಗೆ ಅಪಾರವಾಗಿದೆ. ಭಾಷಾ ಶುದ್ಧತೆ, ತುಡಿತ, ಪ್ರಾಮಾಣಿಕತೆ, ಶ್ರಮ, ತಾಳ್ಮೆ, ಕಷ್ಟವನ್ನು ಎದುರಿಸಿ ಗೆದ್ದು ಬರುವ ಗುಣವನ್ನು ತುಳುವ ಮಣ್ಣು ಕಲಿಸಿದೆ. ಆದರೆ ಈಗ ಮಾಧ್ಯಮದಲ್ಲಿ ರಾಜಕೀಯ ಪ್ರವೇಶದಿಂದ ತುಳು ಪ್ರತಿಭೆಗಳು ಅವಕಾಶ ಕಳೆದುಕೊಳ್ಳುತ್ತಿರುವುದು ಬೇಸರದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ, ನ್ಯಾಯಾವಾದಿ ಎಂ. ಕೆ ಸುವೃತ ಕುಮಾರ್‌, ಮಂಗಳೂರು ವಿವಿ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿಕೆ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸ, ತುಳು ಪೀಠ ಮತ್ತು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ ಮೊದಲಾದವರು ಭಾಗವಹಿಸಿದ್ದರು.

ABOUT THE AUTHOR

...view details