ಮಂಗಳೂರು:ನಗರದಲ್ಲಿ ಡಿ.19ರಂದು ನಡೆದ ಹಿಂಸಾಚಾರ, ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ವಾಸ್ತವಾಂಶವನ್ನು ಮರೆಮಾಚದೆ ಸತ್ಯಶೋಧನೆಯನ್ನು ನಡೆಸಲಾಗಿದೆ. ಅಂತಿಮ ವರದಿಯನ್ನು ಆದಷ್ಟು ಬೇಗ ಸಾರ್ವಜನಿಕರಿಗೆ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.19ರಂದು ಮಂಗಳೂರಿನಲ್ಲಿ ನಡೆದಿರುವ ಹಿಂಸಾಚಾರ ಹಾಗೂ ಗೋಲಿಬಾರ್ ಗೆ ಸಂಬಂಧಿಸಿ, ಸತ್ಯಾಂಶದ ಕುರಿತು ವರದಿ ಮಾಡಲು ಬಂದಿರುವ ಅವರು ಎರಡು ದಿನಗಳಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಗೋಲಿಬಾರ್ ಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ತೆರಳಿ ಭೇಟಿಯಾಗಿರುವೆ. ಅಂದಿನ ಪರಿಸ್ಥಿತಿ ಕುರಿತು ಅವರಲ್ಲಿ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಿದ್ದೇನೆ. ಅಲ್ಲದೆ ಅವರ ಮನೆಯರೊಂದಿಗೂ ಸಂವಹನ ನಡೆಸಿದ್ದೇನೆ. ಜೊತೆಗೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೊಂದಿಗೂ ಈ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಕಟಣೆ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೂ ಮಾತನಾಡಿ, ಮಾಹಿತಿ ಸಂಗ್ರಹಿಸಿದ್ದೇವೆ. ಜೊತೆಗೆ ಅಂದು ಸ್ಥಳದಲ್ಲಿದ್ದ ಪತ್ರಕರ್ತರು, ಪ್ರಮುಖ ವ್ಯಕ್ತಿಗಳೊಂದಿಗೂ ಮಾತನಾಡಿ ವಿಷಯ ಸಂಗ್ರಹ ಮಾಡಲಾಗಿದೆ. ಅಲ್ಲದೆ ಪ್ರಮುಖವಾಗಿ ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಎಫ್ಐಆರ್ ದಾಖಲೆ, ಹಿಂಸಾಚಾರ ನಡೆದ ದಿನದ ಫೋಟೊಗಳು, ಸಿಸಿ ಕ್ಯಾಮೆರಾ ದೃಶ್ಯ , ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ದಾಖಲೆಗಳನ್ನು ಇರಿಸಿ ಅಂದಿನ ಘಟನೆಯ ನೈಜತೆಯ ಬಗ್ಗೆ ನಿರ್ಧಾರ ಮಾಡಲು ಸಾಧ್ಯ ಎಂದು ನ್ಯಾ. ಗೋಪಾಲಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸತ್ಯಶೋಧನಾ ವರದಿಯು ನ್ಯಾಯ ಮಂಡಳಿ ಅಥವಾ ಸಿಎಎ ಕಾಯ್ದೆಯನ್ನು ವಿರೋಧ ಮಾಡಲು ನಡೆಸಿರುವ ತನಿಖೆಯಲ್ಲ. ಇದು ಘಟನೆ ನಡೆದಂದಿನ ಕೂಲಂಕುಷ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನ ಅಷ್ಟೇ ಎಂದು ಹೇಳಿದರು.
ಈ ಬಗ್ಗೆ ಆದಷ್ಟು ಬೇಗ ಸತ್ಯಶೋಧನಾ ವರದಿಯನ್ನು ಸಾರ್ವಜನಿಕರ ಮುಂದಿರಿಸಲಾಗುತ್ತದೆ. ಆದರೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ ಕೂಡಲೇ ಸುದ್ದಿಗೋಷ್ಠಿ ಕರೆಯುವ ಉದ್ದೇಶ ಹೊಂದಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ ಸುದ್ದಿಗೋಷ್ಠಿ ಕರೆಯಲು ಇನ್ನೂ ಪೊಲೀಸರಿಂದ ಅನುಮತಿ ದೊರಕಿಲ್ಲ. ಆದರೆ ಕಾನೂನು ಪ್ರಕಾರ ಸುದ್ದಿ ಗೋಷ್ಠಿ ನಡೆಸಲು ಅನುಮತಿಯ ಅಗತ್ಯ ಇಲ್ಲ. ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವ ಅಗತ್ಯ ಇದೆ ಎಂದು ನ್ಯಾ.ಗೋಪಾಲ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.