ಮಂಗಳೂರು (ದಕ್ಷಿಣ ಕನ್ನಡ) : ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ, ನಿಧಾನವಾಗಿ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಘಟನೆ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಕೊಲೆಗೀಡಾದ ವ್ಯಕ್ತಿ. ಫಯಾಝ್‌ಗೆ ರಾಡ್ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಹತ್ಯೆ ಮಾಡಲಾಗಿದೆ.
ಫಯಾಝ್ ಕೋಟೆಬಾಗಿಲು ಮಸೀದಿಗೆ ನಮಾಜ್ಗೆಂದು ಮಧ್ಯಾಹ್ನ ತೆರಳುವ ಸಂದರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದಾನೆ. ಇದರಿಂದಾಗಿ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಮೇಲೆ ಧೂಳು ಹಾರಿದೆ. ಆಗ ಕೋಪಗೊಂಡ ಫಯಾಝ್ ನಿಧಾನ ಹೋಗುವಂತೆ ಆರೀಸ್ಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ನಮಾಜ್ ಮುಗಿಸಿಕೊಂಡು ಹಿಂತಿರುಗುವ ಸಂದರ್ಭದಲ್ಲಿಯೂ ಮತ್ತೆ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಫಯಾಝ್ ಟಿಪ್ಪರ್ನ ಮೇಲೆ ಹೋಗಿ ಮಾತನಾಡಿದ್ದಾನೆ. ಆಗ ಆರೀಸ್ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಟಿಪ್ಪರ್ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದಾನೆ. ಆಯತಪ್ಪಿ ಫಯಾಝ್ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರ್ ಹಾಯಿಸಿದ್ದಾನೆ.