ಮಂಗಳೂರು: ಅಡಿಕೆ ಮರಗಳಿಗೆ ಬಾಧಿಸುವ ಎಲೆಚುಕ್ಕಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ವಿಜ್ಞಾನಿಗಳು, ತಜ್ಞರೊಂದಿಗೆ ಮುಂದಿನ ತಿಂಗಳು ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗುವುದು. ಮೊದಲಿಗೆ ಅಡಿಕೆ ಮರಕ್ಕೆ ಬಾಧಿಸುವ ಎಲೆಚುಕ್ಕಿ ರೋಗದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಆ ವಿಡಿಯೋವನ್ನು ಇಸ್ರೇಲ್ ವಿಜ್ಞಾನಿಗಳ ಮುಂದೆ ಪ್ರದರ್ಶಿಸಲಾಗುತ್ತದೆ. ಈ ಮೂಲಕ ದೇಶದ ವಿಜ್ಞಾನಿಗಳ ಸಂಶೋಧನೆಯೊಂದಿಗೆ ಇಸ್ರೇಲ್ ವಿಜ್ಞಾನಿಗಳ ಸಲಹೆಯನ್ನು ಪಡೆದು ರೋಗದ ಬಾಧೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಚನೆಯಿದೆ ಎಂದರು.
ರಾಜ್ಯದಲ್ಲಿ 6.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅದರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉ.ಕ., ಕೊಡಗು, ಉಡುಪಿ ಹಾಗೂ ಹಾಸನ ಸೇರಿದಂತೆ ಏಳು ಜಿಲ್ಲೆಗಳ 42,504 ಹೆಕ್ಟೇರ್ ಪ್ರದೇಶಗಳಲ್ಲಿ ಎಲೆ ಚುಕ್ಕಿ ರೋಗದ ಬಾಧೆಯಿದೆ. ಎಲೆ ಚುಕ್ಕಿ ರೋಗ ಬಿಸಿಲು ಇರುವ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತೇವ ಭರಿತ ವಾತಾವರಣ, ಕಡಿಮೆ ಉಷ್ಣಾಂಶ ಇರುವೆಡೆಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ.
ರೋಗ ಬಾಧಿತ ಎಲೆಗಳನ್ನು ಕತ್ತರಿಸಲು ರೈತರಿಗೆ ದೋಟಿ, ಏಣಿಗಳನ್ನು ಉಚಿತವಾಗಿ ನೀಡಲು ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ. ಆ ಬಳಿಕ ನಾವು ಸೂಚಿಸಿರುವ ಏಜೆನ್ಸಿಯವರು ಮರಗಳಿಗೆ ದ್ರಾವಣವನ್ನು ಸಿಂಪಡಿಸುತ್ತಾರೆ. ರೋಗ ಬಾಧಿತ ಎಲೆಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ಎಲೆಚುಕ್ಕಿ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ರೋಗ ಪ್ರಾರಂಭಿಕ ಹಂತದಲ್ಲಿ ಶಿಲೀಂದ್ರ ನಾಶಕಗಳಾದ ಮ್ಯಾಂಕೋಜೆಬ್ 2.5 ಗ್ರಾಂ ಅಥವಾ ಮ್ಯಾಂಕೋಜೆಬ್ + ಕಾರ್ಬೈನ್ ಡೈಜಿಮ್ 2.5 ಗ್ರಾಂ ಪ್ರತೀ 1 ಲೀ. ನೀರಿಗೆ ಅಥವಾ ಹೆಕ್ಸಕೊನಜೋಲ್ 5% 2 ಮಿ.ಲೀ. ಅನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಅಂಟು ದ್ರಾವಣದ ಜೊತೆಗೆ ಸಿಂಪಡಿಸಬೇಕು. ಆ ಬಳಿಕವೂ ರೋಗ ಕಂಡು ಬಂದಲ್ಲಿ ಪ್ರೋಪಿಕೊನೋಜಾಲ್ 1.ಮಿ.ಲೀ. ಅನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಅಂಟು ದ್ರಾವಣದೊಂದಿಗೆ 25 - 30 ಬಳಿಕ ಮತ್ತೊಮ್ಮೆ ಸಿಂಪಡಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ:ಮ್ಯಾಂಡಸ್ ಚಂಡಮಾರುತದ ಎಫೆಕ್ಟ್: ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್