ಮಂಗಳೂರು:ಕೇರಳದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದ ತನಕ ಕಾಸರಗೋಡಿಗೆ ಬಸ್ ಸಂಚಾರ ಆರಂಭಿಸದಿರಲು ದ.ಕ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳಕ್ಕೆ ಬಸ್ ಸಂಚಾರ ಆರಂಭವಾದ ಬಳಿಕ ಎಲ್ಲಾ ಪ್ರಯಾಣಿಕರ ಮೇಲೆ ನಿಗಾ ಇರಿಸಿ, ಸೋಂಕು ನಿಯಂತ್ರಣ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಮುಂದಿನ ಒಂದು ವಾರಗಳ ಸೋಂಕು ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡು ಕಾಸರಗೋಡು ಪಾಸಿಟಿವಿಟಿ ರೇಟ್ ಇಳಿಕೆಯಾದಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಯೋಚನೆ ಮಾಡಲಾಗುತ್ತದೆ ಎಂದು ಹೇಳಿದರು.
ಅಲ್ಲದೆ ಮುಂಬರುವ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಬರುತ್ತದೆ. ಆದ್ದರಿಂದ ಕೊರೊನಾ ಸೋಂಕು ಹರಡದಂತೆ ಹಬ್ಬಗಳನ್ನು ಆಚರಿಸುವ ಬಗ್ಗೆ ಸೂಕ್ತ ಕಾರ್ಯಸೂಚಿಯನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಇದೇ ವಾರದಲ್ಲಿ ಧಾರ್ಮಿಕ ಪರಿಷತ್ ಸಭೆ ನಡೆಸಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸಿದರೆ ನಾಗರಿಕರು ದೂರು ನೀಡಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಹೆಚ್ಚುವರಿ ಮೊತ್ತವನ್ನು ಕೊಡಿಸಲಾಗುತ್ತದೆ. ಕೊರೊನಾ ಸೋಂಕಿತರ ಚಿಕಿತ್ಸಾ ವೆಚ್ಚದ ಬಿಲ್ ಪರಿಶೀಲನೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಇದುವರೆಗೆ 17 ಖಾಸಗಿ ಆಸ್ಪತ್ರೆಗಳ 2,802 ಪ್ರಕರಣಗಳ ಬಿಲ್ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ 66 ಪ್ರಕರಣಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿರುವುದು ಕಂಡು ಬಂದಿದೆ ಎಂದರು.