ಕಡಬ( ದಕ್ಷಿಣ ಕನ್ನಡ): ಲಾಕ್ಡೌನ್ನಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ ತಂಬಾಕು ಉತ್ಪನ್ನಗಳನ್ನು ಸೇವಿಸುವವರನ್ನು ಅಸ್ತ್ರವಾಗಿಟ್ಟುಕೊಂಡು ಜನರಿಂದ ಮೂರು ಪಟ್ಟು ಹೆಚ್ಚಾಗಿ ದರ ವಸೂಲಿ ಮಾಡಿ ಕೆಲವು ಚಿಲ್ಲರೆ ತಂಬಾಕು ವ್ಯಾಪಾರಿಗಳು ಹಣ ಗಳಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರತೊಡಗಿವೆ.
ದುಶ್ಚಟವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ತಂಬಾಕು ಉತ್ಪನ್ನ ಮಾರಾಟಗಾರರು! - ದುಪ್ಪಟ್ಟು ಬೆಲೆಗೆ ಮಾರಾಟ
ತಂಬಾಕು ಸೇವನೆ ಮಾಡುವ ಅಭ್ಯಾಸವಿರುವ ವ್ಯಸನಿಗಳನ್ನೇ ಅಸ್ತ್ರವಾಗಿಟ್ಟುಕೊಂಡ ಕೆಲ ಚಿಲ್ಲರೆ ತಂಬಾಕು ವ್ಯಾಪಾರಿಗಳು ಲಾಕ್ಡೌನ್ ಸಮಯದಲ್ಲಿ ಹಿಂದೆ ಇರುವುದಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದರ ಮೂಲಕ ಜನರ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿದೆ.

ಸುಳ್ಯ ತಾಲೂಕಿನ ವಿವಿಧ ಕಡೆಗಳ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮೂರು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಬಾರದೆಂಬ ನಿಯಮ ಈಗಾಗಲೇ ಜಾರಿಯಲ್ಲಿದ್ದರೂ ಸಹ ಸುಳ್ಯ, ಕಡಬ ಸೇರಿದಂತೆ ಇನ್ನಿತರ ತಾಲೂಕಿನ ಕೆಲವು ಕಡೆಗಳಲ್ಲಿ ಆರು ರೂಪಾಯಿಗೆ ಮಾರುತ್ತಿದ್ದ ತಂಬಾಕು ಉತ್ಪನ್ನಗಳನ್ನು ಮೂವತ್ತರಿಂದ ನಲವತ್ತು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮೂರು ರೂಪಾಯಿ ಇದ್ದ ತಂಬಾಕು ಉತ್ಪನ್ನಗಳು ಹತ್ತರಿಂದ ಹದಿನೈದು ರೂಪಾಯಿ ಆಗಿವೆ.
ಈ ತಂಬಾಕು ಉತ್ಪನ್ನಗಳನ್ನು ಯಾರಿಗೂ ಕಾಣದ ರೀತಿಯಲ್ಲಿ ಚಿಕ್ಕಪುಟ್ಟ ಡಬ್ಬಿಯಲ್ಲಿ ಹಾಕಿ ಅಡಗಿಸಿ ಇಟ್ಟು ವ್ಯಾಪಾರ ಮಾಡುವುದರಿಂದ ಇದರ ಬಗ್ಗೆ ಮಾಹಿತಿ ಪಡೆಯಲು ಬರುವ ಅಧಿಕಾರಿಗಳಿಗೂ ಸಹ ಇವುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.