ಮಂಗಳೂರು: ಓರ್ವ ಸಾಧಕನನ್ನು ಕಂಡು ನಾವು ಸಾಧಕರಾಬೇಕೆಂದು ಬಯಸುತ್ತೇವೆ. ಆದರೆ ಅವರಂತೆ ಸಾಧನೆ ಮಾಡಲು ಮಾತ್ರ ನಾವು ಹಿಂದೇಟು ಹಾಕುತ್ತೇವೆ. ಸಾಧನೆ ಅನ್ನೋದು ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದ.ಕ ಜಿಲ್ಲಾ ಕಸಪಾ, ಕಲ್ಕೂರ ಪ್ರತಿಷ್ಠಾನ, ಸುಹಾಸಂ ವತಿಯಿಂದ ನಗರದ ಕದ್ರಿ ಕಂಬಳದಲ್ಲಿರುವ 'ಮಂಜುಪ್ರಾಸಾದ'ದಲ್ಲಿ ನಡೆದ 'ಸಾಮಾನ್ಯರಾಗಬೇಡಿ ಶ್ರೇಷ್ಠರಾಗಿ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶಾಂತರಾಜ ಐತಾಳರು ಸಾಮಾನ್ಯರಾಗಬೇಡಿ ಶ್ರೇಷ್ಠರಾಗಿ ಎಂಬ ಪುಸ್ತಕದ ಮೂಲಕ ಸಮಾಜಕ್ಕೆ ಕರೆ ಕೊಟ್ಟಿದ್ದು ಮಾತ್ರವಲ್ಲ, ಅದಕ್ಕೊಂದು ಕೈಪಿಡಿಯನ್ನೂ ನೀಡಿದ್ದಾರೆ. ಬರಿದೇ ಆಡಿ ಮುಗಿಸಿಲ್ಲ, ಅದಕ್ಕೊಂದು ದಾರಿಯನ್ನೂ ಕೊಟ್ಟಿದ್ದಾರೆ.
ಸಮಾಜದಲ್ಲಿ ತಾನೋರ್ವ ಅಸಾಮಾನ್ಯನಾಗಬೇಕೆಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಶಾಂತರಾಜ ಐತಾಳರು ಸಮಾಜ, ಪುರಾಣ, ಕಂಡು ಕೇಳಿದ್ದ ಘಟನೆಗಳ ದೋಷಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅನೇಕ ಪುಟ್ಟ ಪುಟ್ಟ ಲೇಖನಗಳ ಮೂಲಕ ನಾವು ಬದುಕಿನಲ್ಲಿ ಯಾವ ರೀತಿ ಮುಂದುವರೆಯಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ರಾಮಾಯಣದಲ್ಲಿ ರಾಮ-ರಾವಣರಿಬ್ಬರೂ ಆದರ್ಶ ಪುರುಷರೇ. ಸಮಾಜದಲ್ಲಿ ನಾವು ಯಾವ ರೀತಿಯಲ್ಲಿ ಬದುಕಬೇಕು ಅನ್ನುವುದಕ್ಕೆ ಶ್ರೀರಾಮಚಂದ್ರ ಆದರ್ಶ ಪುರುಷನಾದರೆ, ಯಾವ ರೀತಿ ಇರಬಾರದು ಅನ್ನುವುದಕ್ಕೆ ರಾವಣ ಆದರ್ಶ ಪುರುಷ. ಮತ್ತೊಬ್ಬನಲ್ಲಿ ದೋಷವನ್ನು ಕಾಣುವ ನಾವು ನಮ್ಮನ್ನೊಮ್ಮೆ ಕನ್ನಡಿಯಲ್ಲಿ ಕಂಡು ನಮ್ಮಲ್ಲೂ ಆ ದೋಷ ಇದೆಯೇ ಎಂಬುದನ್ನು ನೋಡಬೇಕಾಗಿದೆ. ಇತ್ತು ಅಂದರೆ ಅದಕ್ಕೆ ಪರಿಮಾರ್ಜನೆ ಮಾಡಲೇಬೇಕಾಗಿದೆ. ದಿನಕ್ಕೊಂದು ನಮ್ಮಲ್ಲಿನ ಅಂತಹ ದೋಷಗಳನ್ನು ದೂರ ಮಾಡಿಕೊಂಡೆವಾದಲ್ಲಿ ನಾವು ಅಸಾಮಾನ್ಯರಾಗಲು ಸಾಧ್ಯ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.