ವಿಪಕ್ಷ ಉಪನಾಯಕ ಯು ಟಿ ಖಾದರ್ ಮಾತನಾಡಿದರು. ಮಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಈಗ ಕೊನೆಯುಸಿರೆಳೆಯುತ್ತಿದೆ. ಅವರಿಗೆ ಟಿಪ್ಪು ಸಾವರ್ಕರ್ ವಿಷಯಗಳೇ ಆಕ್ಸಿಜನ್ ಆಗಿದೆ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಟೀಕೆ ಮಾಡಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ಮತ್ತು ಸಾವರ್ಕರ್ ಚುನಾವಣೆಯ ವಿಷಯ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇವರಿಗೆ ಟಿಪ್ಪು, ಸಾವರ್ಕರ್, ಭಯೋತ್ಪಾದನೆ, ತಾಲಿಬಾನ್, ಎಸ್ ಡಿ ಪಿ ಐ ವಿಷಯಗಳೇ ಆಕ್ಸಿಜನ್ ಆಗಿವೆ ಎಂದು ಹರಿಹಾಯ್ದರು.
ಪ್ರಚೋದನಕಾರಿ ಹೇಳಿಕೆಗಳಿಂದ ಬಿಜೆಪಿ ಅಧಿಕಾರಕ್ಕೆ: ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇಂಥ ವಿಷಯಗಳನ್ನು ಪ್ರಚೋದನಕಾರಿಯಾಗಿ ಹೇಳಿಕೊಂಡು. ಆದರೆ ನಮಗೆ ಅದರ ಅಗತ್ಯವಿಲ್ಲ. ಇದರಿಂದ ಪ್ರಯೋಜನ ತೆಗೆದುಕೊಳ್ಳುವವರು ಅವರು. ಟಿಪ್ಪು, ಪಾಕಿಸ್ತಾನ ಬಿಟ್ಟರೆ ಅವರಿಗೆ ಬೇರೆ ವಿಷಯವಲ್ಲ. ಅದಕ್ಕಾಗಿ ಅವರ ಆಕ್ಸಿಜನ್ ಕಟ್ ಮಾಡಬೇಕು ಎಂದು ಆರೋಪಿಸಿದರು.
ತಾಲಿಬಾನ್ ಗೆ ದುಡ್ಡು ಕೊಡಲು ಹೇಳಿದ್ಯಾರು? :ಇವರ ರಾಜಕೀಯ ಉದ್ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡುವುದಿಲ್ಲ. ತಾಲಿಬಾನ್ ಗೆ ದುಡ್ಡು ಕೊಡಲು ಹೇಳಿದ್ಯಾರು? ತಾಲಿಬಾನ್ ಗೆ ಸಾವಿರಾರು ಕೋಟಿ ರೂಪಾಯಿ ಕೊಟ್ಟದ್ದು ಯಾಕೆ? ಅವರಿಗೆ ಅಕ್ಕಿ, ಗೋಧಿ ಕೊಡಲು ಯಾರು ಹೇಳಿದ್ದು. ಪಾಕಿಸ್ತಾನ ಕ್ರಿಕೆಟ್ ಟೀಮ್ ಜೊತೆಗೆ ದುಬೈನಲ್ಲಿ ಆಡಲು ಯಾಕೆ ಅವಕಾಶ ಕೊಟ್ಟದ್ದು ಎಂದು ಪ್ರಶ್ನಿಸಿದರು.
ಚುನಾವಣೆ ಬಂದಾಗ ತುಳು ಭಾಷೆಯ ಚಿಂತನೆ: ಜನರಿಗೆ ಇವರು ಹೇಗೆ ಮೋಸ ಮಾಡುತ್ತಾರೆಂದರೆ, 5 ವರ್ಷ 8 ನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವ ಬಗ್ಗೆ ಮಾತನಾಡಿದರು. ಚುನಾವಣೆ ಹತ್ತಿರ ಬರುವಾಗ ತುಳುವನ್ನು ಎರಡನೇ ರಾಜ್ಯಭಾಷೆ ಮಾಡಲು ಅಧ್ಯಯನ ಸಮಿತಿ ಮಾಡಿದರು. ಇದನ್ನು ನಾನು ಕರಾವಳಿಯಲ್ಲಿ ದೈವ ನುಡಿ ಕೊಡುವ ಭಾಷೆ ಎಂದು ಹೇಳಿದ್ದೇನೆ. ಈ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಅವರ ಪ್ರತಿಕ್ರಿಯೆ ಉದ್ದೇಶಪೂರ್ವಕವಾಗಿ ನೀಡಿದ್ದಾ ಎಂಬುದು ಗೊತ್ತಿಲ್ಲ ಎಂದರು.
ಬಜೆಟ್ ನಲ್ಲಿ ಕರಾವಳಿ ಜನರಿಗೆ ಸಂಪೂರ್ಣ ಮೋಸ: ಈ ಬಾರಿಯ ಬಜೆಟ್ ನಲ್ಲಿ ಕರಾವಳಿ ಜನರಿಗೆ ಸಂಪೂರ್ಣ ಮೋಸ ಮಾಡಲಾಗಿದೆ. ಮೀನುಗಾರರಿಗೆ ಹಿಂದೆ ಹೇಳಿದ್ದನ್ನೇ ಮಾಡಿಲ್ಲ. ಇವರು ಅಧಿಕಾರಕ್ಕೆ ಬಂದ ನಂತರ ಒಂದು ಮನೆಯನ್ನು ಮೀನುಗಾರರಿಗೆ ಕೊಟ್ಟಿಲ್ಲ. ಕರಾವಳಿ ಮೀನುಗಾರರಿಗೆ ನೀಡಿದ 350 ಮನೆಗಳ ಭರವಸೆಗೆ ದುಡ್ಡು ಬಂದಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಡ್ರಜ್ಜಿಂಗ್ ಬಗ್ಗೆ ಯೋಜನೆಗಳಿಲ್ಲ ಎಂದು ಯು ಟಿ ಖಾದರ್ ಆರೋಪಿಸಿದರು.
ಕಟೀಲ್ ಕುರಿತು ಖಾದರ್ ಟೀಕೆ: ಇನ್ನು, ನಳಿನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ಕೆಲಸ ಮಾತಾಡಬೇಡಿ, ಲವ್ ಜೆಹಾದ್ ಬಗ್ಗೆ ಮಾತನಾಡಿ ಎಂದು ಹೇಳಿರುವುದನ್ನು ಕೇಳಿ ಸಿ ಎಂ ಬೊಮ್ಮಾಯಿ ಅವರು ಕರಾವಳಿ ಜಿಲ್ಲೆಗೆ ಏನೂ ಕೊಟ್ಟಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂಓದಿ:ಮೋದಿ ಕೈಕೆಳಗೆ ಕೆಲಸ ಮಾಡಲು ಖುಷಿ ಇದೆ, ರಾಜ್ಯ ರಾಜಕಾರಣದತ್ತ ಬರೋಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ