ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿರುವ ರಾಣಿ ಎಂಬ 8 ವರ್ಷದ ಹುಲಿ ಕೆಲವು ದಿನಗಳ ಹಿಂದೆ ಐದು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ 3 ಹೆಣ್ಣು ಹಾಗೂ 2 ಗಂಡು ಮರಿಗಳಿವೆ.
ಐದು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ರಾಣಿ... ಪಿಲಿಕುಳದಲ್ಲಿ ತಾಯಿ ಮಕ್ಕಳು ಸುರಕ್ಷಿತ - ಮಂಗಳೂರು
ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಆ ಸಾಲಿಗೆ ಮತ್ತೆ ಕೆಲ ಹುಲಿಗಳು ಸೇರ್ಪಡೆಯಾಗಿದೆ. ಹೌದು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ.
ಹುಲಿಗಳು 2 ರಿಂದ 3 ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಆದರೆ ರಾಣಿ 5 ಮರಿಗಳಿಗೆ ಜನ್ಮ ನೀಡಿದೆ. ಕೆಲವು ದಿನಗಳ ಹಿಂದೆ ಈ ಹುಲಿ ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಿಗೆ ಸೋಂಕು ಆಗಬಾರದೆಂದು ಎಚ್ಚರಿಕೆ ವಹಿಸಲಾಗುತ್ತಿದೆ. ಸದ್ಯಕ್ಕೆ ಈ ಮರಿಗಳು ತಾಯಿಯ ಹಾಲನ್ನು ಮಾತ್ರ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸವನ್ನು ನೀಡಲಾಗುವುದು. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳುಹಿಸಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.
ಸದ್ಯಕ್ಕೆ ಈ ತಾಯಿ-ಮರಿ ಹುಲಿಗಳ ಸಾರ್ವಜನಿಕ ವೀಕ್ಷಣೆಗೆ 2-3 ತಿಂಗಳ ತನಕ ಅವಕಾಶವಿರುವುದಿಲ್ಲ. ಬಳಿಕ ಅಗತ್ಯ ಚುಚ್ಚುಮದ್ದುಗಳನ್ನು ನೀಡಿ ಆರೋಗ್ಯ ಪರಿಶೀಲಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.