ಮಿಸೆಸ್ ಇಂಡಿಯಾ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾದ ಮೂವರು ವಿವಾಹಿತ ಮಹಿಳೆಯರು ಮಂಗಳೂರು (ದಕ್ಷಿಣ ಕನ್ನಡ): ಮದುವೆಯಾದ ಮೇಲೆ ಸಾಮಾನ್ಯವಾಗಿ ಮಹಿಳೆಯರು ಮನೆ, ಮಕ್ಕಳು, ಸಂಸಾರ ಎಂಬ ಜಂಜಡದಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಮದುವೆಗೂ ಮುನ್ನ ಏನಾದರೂ ಸಾಧಿಸಬೇಕು ಅಂದುಕೊಂಡಿದ್ದರೂ ಅದು ಕೇವಲ ಕನಸಾಗಿಯೇ ಉಳಿದುಬಿಡುತ್ತದೆ. ಹಾಗಂತ ಮದುವೆ ನಂತರ ಬರುವ ಕರ್ತವ್ಯಗಳು ಸಾಧನೆಗೆ ಅಡ್ಡಗಾಲಾಗಿ ನಿಲ್ಲುತ್ತವೆ ಎಂದರ್ಥವಲ್ಲ. ಇದಕ್ಕೆ ಮಂಗಳೂರಿನ ಮೂವರು ಮಹಿಳೆಯರು ನಿದರ್ಶನ. ಇವರು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿದ್ದಾರೆ.
ಫ್ಯಾಷನ್ ಲೋಕವೆಂದರೆ ಹದಿಹರೆಯದ ವಯಸ್ಸಿನವರಿಗೆ ಮಾತ್ರ ಎಂಬ ಕಾಲವೊಂದಿತ್ತು. ಆದರೀಗ ವಯೋವೃದ್ದರವರೆಗೂ ಫ್ಯಾಷನ್ ಜಗತ್ತು ಆವರಿಸಿಕೊಂಡಿದೆ. ಅದಕ್ಕಾಗಿ ವೇದಿಕೆಯೂ ಸಿದ್ಧವಿದೆ. ವಿವಾಹಿತ ಮಹಿಳೆಯರಿಗಾಗಿ ಇರುವ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಗಳು ನಡೆಯುತ್ತಿವೆ. ಮುಂದಿನ ವರ್ಷದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆ ನಡೆದಿದ್ದು, ಇದರಲ್ಲಿ ಮಂಗಳೂರಿನ ಮೂವರು ವಿವಾಹಿತ ಮಹಿಳೆಯರು ಆಯ್ಕೆಯಾಗಿದ್ದಾರೆ.
ಈ ಮೂವರು ಮಹಿಳೆಯರು ಮಿಸ್ ಆಗಿದ್ದಾಗ ಮಿಸ್ ಮಾಡಿಕೊಂಡಿದ್ದ ತಮ್ಮ ಕನಸನ್ನು ಮಿಸೆಸ್ ಆದ್ಮೇಲೆ ನನಸು ಮಾಡಿಕೊಂಡಿದ್ದಾರೆ. ಈ ಮಹಿಳಾಮಣಿಯರ ಹೆಸರು ಡಾ.ಜೆಸ್ಸಿ ಮರಿಯಾ ಡಿಸೋಜ, ಸೌಮ್ಯಲತಾ, ಶಾರ್ಲೆಟ್ ಫೆರಾವೊ. ಸೌಮ್ಯಲತಾ ಉದ್ಯಮಿಯಾಗಿದ್ದು, ಜೆಸ್ಸಿ ಮರಿಯಾ ಡಿಸೋಜ ಪ್ರಸೂತಿ ತಜ್ಞೆ ಮತ್ತು ಶಾರ್ಲೆಟ್ ಫೆರವೊ ಗೃಹಿಣಿಯಾಗಿದ್ದಾರೆ.
ಇವರು ಬೆಂಗಳೂರಿನಲ್ಲಿ ಪ್ರತಿಭಾ ಸೌನ್ಸಿಮಠ್ ಅವರು ಆಯೋಜಿಸಿದ ಏಳನೇ ಆವೃತ್ತಿಯಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ರೂಪದರ್ಶಿಗಳಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಕರ್ನಾಟಕದ 20ರಿಂದ 40 ವರ್ಷದ ವಿಭಾಗದಲ್ಲಿ ಸೌಮ್ಯಲತ, ಮಿಸೆಸ್ ಇಂಡಿಯಾ ಕರ್ನಾಟಕ ಕ್ಲಾಸಿಕ್ ವಿಭಾಗ (40-60 ವರ್ಷ) ದಲ್ಲಿ ಶಾಲೆಟ್ ಫೆರಾವೊ, ಡಾ.ಜೆಸ್ಸಿ ಮರಿಯಾ ಡಿಸೋಜ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಎಂಟ್ರಿ ಪಡೆದಿದ್ದಾರೆ.
ಮಿಸೆಸ್ ಇಂಡಿಯಾ ಜಿಲ್ಲಾ ಸಂಚಾಲಕರಾದ ದೀಪಕ್ ಗಂಗೂಲಿ ಹಾಗೂ ಮರ್ಸಿ ವೀಣಾ ಡಿಸೋಜ ತರಬೇತಿ ನೀಡಿ ಮಂಗಳೂರಿನ ಆರು ಮಂದಿಯನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಿದ್ದರು. ರಾಜ್ಯದಿಂದ ಒಟ್ಟು 34 ಮಂದಿ ಸ್ಪರ್ಧಿಗಳು ಈ ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ಭಾಗವಹಿಸಿದ್ದರು. ಒಟ್ಟು ಮೂರು ದಿನಗಳು 10 ಸ್ಪರ್ಧೆಗಳಲ್ಲಿ ಮಂಗಳೂರಿನ ಈ ಮೂವರು ಕಿರೀಟ ಮುಡಿಗೇರಿಸಿದ್ದಾರೆ.
ಈ ಸ್ಪರ್ಧೆ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಬಾಹ್ಯ ಸೌಂದರ್ಯವೊಂದೇ ಮಾನದಂಡವಾಗಿರಲಿಲ್ಲ. ಜಡ್ಜ್ಗಳು ಇವರ ಹಾವ-ಭಾವ, ನಡೆ-ನುಡಿ, ಆಂತರಿಕ ಸೌಂದರ್ಯ, ಓರ್ವ ಮಹಿಳೆಯಾಗಿ ನಿಭಾಯಿಸಬೇಕಾದ ಕರ್ತವ್ಯ, ಪ್ರತಿಭೆ, ಬುದ್ಧಿ ಎಲ್ಲವನ್ನೂ ಪರಿಗಣಿಸಿದ್ದರು. ಈ ಎಲ್ಲಾ ಸ್ಪರ್ಧೆಗಳಲ್ಲಿ ಗೆದ್ದು ಮಂಗಳೂರಿನ ಮೂವರು ಮಹಿಳೆಯರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮನೆ, ಮಕ್ಕಳು, ಸಂಸಾರವಿದ್ದರೂ ಕೂಡ, ವೃತ್ತಿ ಬದುಕನ್ನು ನಿಭಾಯಿಸಿ ತಮ್ಮ ಕನಸಿಗೆ ಬಣ್ಣ ಹಚ್ಚಿ ವೇದಿಕೆಯೇರಿ ಕ್ಯಾಟ್ ವಾಕ್ ಮಾಡಿದ್ದಾರೆ.
ಡಾ.ಜೆಸ್ಸಿ ಮರಿಯಾ ಡಿಸೋಜ ಸಂತಸ ವ್ಯಕ್ತಪಡಿಸಿ, "ಕಾಲೇಜು ದಿನಗಳಲ್ಲಿ ಫ್ಯಾಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆದರೆ ಮದುವೆಯಾದ ಬಳಿಕ ಮನೆ ಮಕ್ಕಳಿಗಾಗಿ ಎಂದು ಸಮಯ ಮುಡಿಪಾಗಿರಿಸಿದ್ದೆ. ಮದುವೆಯಾದ 27 ವರ್ಷದ ಬಳಿಕ ಈ ಸಾಧನೆ ಮಾಡಲು ಸಾಧ್ಯವಾಯಿತು. ಈ ಸ್ಪರ್ಧೆಯಲ್ಲಿ ನನ್ನ ದೇಹ ದಪ್ಪವನ್ನು ನೋಡದೆ ಆಂತರಿಕ ಸೌಂದರ್ಯ ಪರಿಗಣಿಸಿ ಕಿರೀಟ ಸಿಕ್ಕಿದೆ" ಎಂದು ಹೇಳಿದರು.
ಸೌಮ್ಯಲತಾ ಮಾತನಾಡಿ, "ಮಿಸ್ ಆಗಿರುವಾಗ ಸಾಧನೆ ಮಾಡಲು ಮಿಸ್ ಆಗಿದ್ದು, ಮಿಸೆಸ್ ಆದ ಬಳಿಕ ಸಾಧನೆ ಮಾಡಿರುವುದು ಖುಷಿ ತಂದಿದೆ. ನನಗೆ ಫ್ಯಾಶನ್ ವರ್ಲ್ಡ್ ಹೊಸತು. ಪೌಡರ್ ಹಾಕದೆ ಮನೆಯಿಂದ ಹೊರಗೆ ಹೋಗುತ್ತಿದ್ದ ನನಗೆ ಈಗ ಈ ಫ್ಯಾಶನ್ ಲೋಕ ಖುಷಿ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಶರ್ಲೆಟ್ ಪ್ರತಿಕ್ರಿಯಿಸಿ, "ಇದು ಉತ್ತಮ ಅನುಭವ ನೀಡಿದೆ. ಮದುವೆ ಆದ ನಂತರ ಮನೆ ಮಕ್ಕಳು ಅಂತ ಸಮಯ ಕೊಡಬೇಕಾಯಿತು. ಮಂಗಳೂರಿನ ಪಾತ್ವೇ ಮತ್ತು ಮರ್ಸಿ ಸೆಲೂನ್ ಸಂಸ್ಥೆ ನಮ್ಮ ಪ್ರತಿಭೆಗಳನ್ನು ಬೇರೆಯವರಿಗೆ ತೋರಿಸಲು ಅವಕಾಶ ಕಲ್ಪಿಸಿತು" ಎಂದು ಹೇಳಿದರು.
"ಮಂಗಳೂರಿನಲ್ಲಿ 17 ಮಂದಿಯಲ್ಲಿ 6 ಮಂದಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಇವರಲ್ಲಿ ಮೂರು ಮಂದಿ ಕಿರೀಟ ಮುಡಿಗೇರಿಸಿದ್ದಾರೆ. ಅವರು ಮುಂದೆ ನಡೆಯುವ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಮದುವೆಗೆ ಮುಂಚೆ ಸಾಧನೆ ಮಾಡಲು ಸಾಧ್ಯವಾಗದವರಿಗೆ ಮದುವೆಯ ಬಳಿಕವೂ ಸಾಧನೆ ಮಾಡಲು ಸಾಧ್ಯವಿದೆ. ಅದಕ್ಕೆ ವೇದಿಕೆಯನ್ನು ನಾವು ಕಲ್ಪಿಸುತ್ತೇವೆ" ಎಂದು ಮಿಸೆಸ್ ಇಂಡಿಯಾದ ಜಿಲ್ಲಾ ಸಂಚಾಲಕರಾದ ದೀಪಕ್ ಗಂಗೂಲಿ ತಿಳಿಸಿದರು.
ಇದನ್ನೂ ಓದಿ:ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ತೃತೀಯಲಿಂಗಿ.. ಇತಿಹಾಸ ಸೃಷ್ಟಿಸಿದ ರಿಕ್ಕಿ