ಸುಳ್ಯ:ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಿದ ಕೀರ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಪಾತ್ರವಾಗಿದೆ. ಈ ಚಂದ್ರಯಾನದ ಯಶಸ್ಸಿಗೆ ನೂರಾರು ವಿಜ್ಞಾನಿಗಳು, ತಂತ್ರಜ್ಞರು, ಇಂಜಿನಿಯರ್‌ಗಳು ಸೇರಿದಂತೆ ಅನೇಕ ಸಿಬ್ಬಂದಿ ಅವಿರತವಾಗಿ ದುಡಿದಿದ್ದಾರೆ. ಈ ತಂಡದಲ್ಲಿ ಸುಳ್ಯದ ಮೂವರು ಸೇರಿ ಕರಾವಳಿ ಭಾಗದ 11 ವಿಜ್ಞಾನಿಗಳು ಮಹತ್ವದ ಯೋಜನೆಯಲ್ಲಿ ಭಾಗಿಯಾಗಿರುವುದು ವಿಶೇಷ.
ಮಾನಸ ಜಯಕುಮಾರ್: ಕಳೆದ ಹಲವು ವರ್ಷಗಳಿಂದ ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ದುಗಲಡ್ಕದ ಮಾನಸ ಜಯಕುಮಾರ್ ಎಂಬುವರು ಮಂಗಳೂರು ವಿವಿಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್‌ನ ಅಹಮದಾಬಾದ್ನಲ್ಲಿ ನಡೆದ ಚಂದ್ರಯಾನ 3 ಪ್ರಾಜೆಕ್ಟ್ ವರ್ಕ್‌ಶಾಪ್‌ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ್ದರು. ಚಂದ್ರಯಾನ 3 ಉಪಗ್ರಹದ ಆ್ಯಂಟೆನಾ ತಯಾರಿಕೆಯ 5 ಜನರ ತಂಡದಲ್ಲಿ ಮಾನಸ ಜಯಕುಮಾರ್ ಕೂಡ ಒಬ್ಬರಾಗಿದ್ದರು.
ಮಂಡೆಕೋಲು ಗ್ರಾಮದ ಜಾಲಬಾಗಿಲು ಬಾಲಕೃಷ್ಣ ಮತ್ತು ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ ಅವರಿಗೆ ವಿವಾಹವಾಗಿದೆ. ಸುಳ್ಯ ದುಗಲಡ್ಕ ಜಯಕುಮಾರ್ ಬಿ.ಎಸ್ ಎಂಬುವರನ್ನು ಮದುವೆಯಾಗಿದ್ದಾರೆ. ಸುಳ್ಯದ ಮಂಡೆಕೋಲು ಶಾಲೆಯಲ್ಲಿ ಪ್ರಾಥಮಿಕ, ಅಜ್ಜಾವರದಲ್ಲಿ ಪ್ರೌಢ ಶಿಕ್ಷಣ, ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ಮಂಗಳೂರು ವಿವಿಯಲ್ಲಿ ಎಂಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಉಬರಡ್ಕದ ವೇಣುಗೋಪಾಲ್: ಇನ್ನು ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸುಳ್ಯದ ಉಬರಡ್ಕದ ವೇಣುಗೋಪಾಲ್ ಅವರು ಚಂದ್ರಯಾನ್ 3 ರಲ್ಲಿ ಪಿಸಿಬಿ ಡಿಸೈನಿಂಗ್ ಟೀಂ ಸ್ಯಾಟ್‌ಲೈಟ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇವರು ಸುಳ್ಯದಲ್ಲಿ ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಇ, ಎಂಇ ಶಿಕ್ಷಣ ಪಡೆದು, ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ.
ಶಂಭಯ್ಯ ಕೆ : ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದವರಾದ ಶಂಭಯ್ಯ ಕೆ ಅವರು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ ಮಿಷನ್‌ನಲ್ಲಿ ಎಲ್‌ಪಿಎಸ್ (ಲಿಕ್ವಿಡ್ ಪ್ರೊಪುಲ್ಲೆಷನ್ ಸಿಸ್ಟಂ) ವಿಭಾಗದ ಯೂನಿಟ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಬೊಳ್ಳಾಜೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಅಳಿಕೆ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಮೈಸೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು, 1989 ರಿಂದಲೇ ಶಂಭಯ್ಯ ಅವರು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಇವರು ಚಂದ್ರಯಾನ 3ರ ಎಲ್‌ಪಿಎಸ್ ಯೂನಿಟ್ ಹೆಡ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉಪ್ಪಿನಂಗಡಿಯ ಶಿವಪ್ರಸಾದ್ ಕಾರಂತ್:ಇವರು ಗೋಳಿತ್ತೊಟ್ಟು ಗ್ರಾಮದ ಕಾಂಚನ ಮಣಿಪುಳದವರು. ಕೇಂದ್ರ ಸಂಪುಟ ಕಾರ್ಯದರ್ಶಿ ಕೇಡರ್ಗೆ ಸಮಾನವಾದ ಉನ್ನತ ವಿಜ್ಞಾನಿ ಹುದ್ದೆಗೆ ಭಡ್ತಿ ಪಡೆದಿರುವ ಶಿವಪ್ರಸಾದ್ ಅವರು ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಕಾಂಚನದ ಪರಮೇಶ್ವರ ಕಾರಂತ ಡಿ. ಮತ್ತು ರಮಾದೇವಿ ಅವರ ಪುತ್ರನಾದ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂಚನದ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕಾಂಚನದ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ, ಎಂ.ಟೆಕ್. ಪದವಿಯನ್ನು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಪೂರೈಸಿ 24 ವರ್ಷಗಳ ಹಿಂದೆ ಇಸ್ರೋ ಸೇರಿದರು. ಪ್ರಸ್ತುತ ಅವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪುತ್ತೂರಿನ ರಾಧಾಕೃಷ್ಣ ವಾಟೆಡ್ಕ: ಇವರು ಕಳೆದ ಸುಮಾರು ಎಂಟು ವರ್ಷಗಳಿಂದ ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ತೂರು ತಾಲೂಕಿನ ಆರ್ಲಪದವಿನ ಕಾಟುಕುಕ್ಕೆ ಸಮೀಪದ ವಾಟೆಡ್ಕ ನಿವಾಸಿ. ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಆರ್ಲಪದವಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ, ಎಂಎಸ್ಸಿಯನ್ನು ಮಂಗಳೂರು ವಿವಿಯಲ್ಲಿ ಪೂರ್ಣಗೊಳಿಸಿದ್ದರು. ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪಿಹೆಚ್‌ಡಿ ಪದವಿ, ಜಪಾನಿನ ಟೊಯೋಹೊಶಿ ವಿಶ್ವವಿದ್ಯಾಲಯದಿಂದ ಪೋಸ್ಟ್ ಪಿಹೆಚ್‌ಡಿ ಅಧ್ಯಯನ ಪೂರ್ಣಗೊಳಿಸಿ ಇಸ್ರೋಗೆ ಸೇರಿದ್ದರು.ಇವರು ಯುವಿ ಫೋಟೋನ್ ಡಿಟೆಕ್ಟರ್ ಉನ್ನತ ವ್ಯಾಸಂಗ ಮಾಡಿದ್ದಾರೆ. ರಾಧಾಕೃಷ್ಣರವರು 2019ರ ಚಂದ್ರಯಾನ-2ರ ತಂಡದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಇರಬಹುದಾದ ನೀರು, ತೇವಾಂಶ, ಕಲ್ಲು ಇತ್ಯಾದಿಗಳ ಪರಿಶೋಧನೆಯ ಸ್ಟೆಕ್ಟಾಮೀಟರ್ ಉಪಕರಣವನ್ನು ಸಜ್ಜುಗೊಳಿಸುವ ಕೆಲಸವನ್ನು ಅವರು ನಿರ್ವಹಿಸಿದ್ದರು.
ಧರ್ಮಸ್ಥಳದ ಪಿ. ವಾಸುದೇವ ರಾವ್: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿ ಗ್ರಾಮದ ದಿವಂಗತ ಪಿ. ಗಣಪತಿ ರಾವ್ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಪಣಿಯಾಡಿ ವಾಸುದೇವ ರಾವ್ ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಚಂದ್ರಯಾನದ ಉಪಗ್ರಹವನ್ನು ಹೊತ್ತೊಯ್ಯುವ ಎಲ್‌ವಿಎಂ-3 ಮತ್ತು ಎಲ್110-10 ಎಂಬ ರಾಕೆಟ್ ಪೈಕಿ ಇಂಧನ ಹಾಗೂ ಆಕ್ಸಿಜನ್ ಹೊತ್ತೊಯ್ಯುವ ಪ್ರಥಮ ಸ್ಟೇಜ್ ಎಲ್110-10 ತಯಾರಿ ಹಾಗೂ ಪರೀಕ್ಷೆ ನಡೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಈ ಬಿಡಿ ಭಾಗವನ್ನು ಬೆಂಗಳೂರು ಹೆಚ್‌ಎಎಲ್‌ನಲ್ಲಿ ಸಿದ್ಧಪಡಿಸಿ ಇಸ್ರೋದ ತಿರುವನಂತಪುರ ಘಟಕಕ್ಕೆ ಕಳುಹಿಸಿಕೊಡುವವರೆಗಿನ ಕಾರ್ಯವನ್ನು ತನ್ನ ತಂಡದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ, ಉಜಿರೆ ಎಸ್‌ಡಿಎಂನಲ್ಲಿ ಪಿಯುಸಿ ಬಳಿಕ ಮಂಗಳೂರು ಕೆಪಿಟಿಯಲ್ಲಿ ಡಿಪ್ಲೊಮಾ, ಮಂಡ್ಯ ಡಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದು ಇಸ್ರೋದ ತಿರುವನಂತಪುರಂ ಘಟಕಕ್ಕೆ ನೇಮಕಗೊಂಡಿದ್ದರು. ಇಸ್ರೋದಲ್ಲಿ ದೀರ್ಘ 32 ವರ್ಷ ಸೇವೆ ಸಲ್ಲಿಸಿದ್ದು 2024 ಆಗಸ್ಟ್‌ಗೆ ಇವರು ನಿವೃತ್ತರಾಗಲಿದ್ದಾರೆ. ಪ್ರಸ್ತುತ ವಾಸುದೇವ ರಾವ್ ಅವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಉಡುಪಿಯ ಸೌಭಾಗ್ಯಾ ಐತಾಳ: ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಾರಂಪಳ್ಳಿಯ ಸೌಭಾಗ್ಯಾ ಐತಾಳ್ ಅವರು ಚಂದ್ರಯಾನ-3 ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇಸ್ರೋ ಸಂಸ್ಥೆಯ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಯುವ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾರಂಪಳ್ಳಿಯ ರಾಘವೇಂದ್ರ ಐತಾಳ್ ಮಹಾಲಕ್ಷ್ಮೀ ಐತಾಳ್ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಚಿತ್ರಪಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಕೋಟ ಬಾಲಕಿಯರ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ, ಮಣಿಪಾಲ ಎಂಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ರಾಜಸ್ಥಾನ ಪಿಲಾನಿಯಲ್ಲಿರುವ ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಅವರು ಮಕ್ಕಳಿಗಾಗಿ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದು, ಧೂಮಕೇತುಗಳು ಬಾಹ್ಯಾಕಾಶದ ಅನಿರೀಕ್ಷಿತ ಅತಿಥಿಗಳು ಕನ್ನಡ ಕೃತಿಯನ್ನು ರಚಿಸಿದ್ದಾರೆ.
ಬ್ರಹ್ಮಾವರದ ಸುಬ್ರಹ್ಮಣ್ಯ ಉಡುಪ: ಬ್ರಹ್ಮಾವರದ ವಿಕ್ರಮ್ ಲ್ಯಾಂಡರ್‌ನ ಕಾಲಿನ ಪಾದದ ಡೈನಾಮಿಕ್ಸ್ ಮಾಡಿದ ವಿಜ್ಞಾನಿಗಳಲ್ಲಿ ಬಾರಕೂರು ನೇಶನಲ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ಉಡುಪ ಕೂಡ ಒಬ್ಬರು. ಇಸ್ರೋ ಸಂಸ್ಥೆಯಲ್ಲಿ ದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು. ಚಂದ್ರಯಾನ-2 ಮತ್ತು 3ರಲ್ಲಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತರಾಗಿದ್ದರೂ ಪ್ರಸ್ತುತ ಸಂಸ್ಥೆ ಅವರ ಸೇವೆಯನ್ನು ಪಡೆದುಕೊಂಡಿದೆ. ಇವರು ತೀರ್ಥಹಳ್ಳಿ ಅರಳ ಸುರಳಿಯ ನಿವೃತ್ತ ಶಿಕ್ಷಕ ಗೋವಿಂದ ರಾಮ ಹಾಗೂ ಶಾರದಾ ಉಡುಪ ದಂಪತಿಯ ಪುತ್ರ.
ಇದನ್ನೂ ಓದಿ :Chandrayaan-3 : ವಿಕ್ರಮ್ ಲ್ಯಾಂಡರ್ಗೆ ಬಿಡಿಭಾಗಗಳ ಪೂರೈಕೆ.. ಚಂದ್ರಲೋಕಕ್ಕೂ ಹಬ್ಬಿದ ಬೆಳಗಾವಿ ಕೀರ್ತಿ
ಕುಂದಾಪುರದ ಇಬ್ಬರು ವಿಜ್ಞಾನಿಗಳು ಸಾಥ್: ಕುಂದಾಪುರ ತಾಲೂಕಿನ ಇಬ್ಬರು ವಿಜ್ಞಾನಿಗಳು ಚಂದ್ರಯಾನ 3ರಲ್ಲಿ ಭಾಗವಹಿಸಿದ್ದರು. ಗುಜ್ಜಾಡಿ ಮಂಕಿಯ ಕೇಳಾಮನೆ ನಿವಾಸಿ ಆಕಾಶ್ ಶೆಟ್ಟಿ ಹಾಗೂ ಕೆರಾಡಿ ಗ್ರಾಮದ ಬೆಳ್ಳಾಲ ಮೋರ್ಟು ನಿವಾಸಿ ರಮೇಶ್ ಆಚಾರ್ಯ ಕುಂದಾಪುರ ತಾಲೂಕಿಗೆ ಹೆಮ್ಮೆ ತಂದವರು. ಇವರಲ್ಲಿ ಆಕಾಶ್ ಶೆಟ್ಟಿ ಅವರು ಮಂಕಿ ಕೇಳಾಮನೆ ಪಾರ್ವತಿ ಶೆಟ್ಟಿ ಹಾಗೂ ಕೆರಾಡಿ ಚಪ್ಪರಮಕ್ಕಿ ದಿ. ಅಶೋಕ ಶೆಟ್ಟಿ ದಂಪತಿಗಳ ಪುತ್ರ. ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕೋಟ ವಿವೇಕ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ ಮುಗಿಸಿ, 2015ರಲ್ಲಿ ಇಸ್ರೋಗೆ ಸೇರಿದರು. ಚಂದ್ರಯಾನ -3ರಲ್ಲಿ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರಲ್ಲಿ ನಡೆದ ಚಂದ್ರಯಾನ -2ರಲ್ಲೂ ಭಾಗವಹಿಸಿದ್ದರು. ಪ್ರಸ್ತುತ ಇವರ ಕುಟುಂಬ ಮುರುಡೇಶ್ವರದಲ್ಲಿ ನೆಲೆಸಿದೆ.
ಇನ್ನೊರ್ವ ರಮೇಶ್ ಆಚಾರ್ಯ ಅವರು ಕೆರಾಡಿ ಗ್ರಾಮದ ಬೆಳ್ಳಾಲ ಮಂಜುನಾಥ ಆಚಾರ್ಯ ಮತ್ತು ಗಿರಿಜಾ ಆಚಾರ್ಯ ದಂಪತಿಗಳ ಪುತ್ರ. 2012ರಲ್ಲಿ ಇಸ್ರೋಗೆ ಸೇರಿದ್ದು, ಭಡ್ತಿ ಪಡೆದ ಇವರು ಪ್ರಸ್ತುತ ಇಸ್ರೋದ ಬೆಂಗಳೂರಿನಲ್ಲಿರುವ ಇಸ್ಟ್ರಾಕ್ ವಿಭಾಗದಲ್ಲಿ ತಾಂತ್ರಿಕ ಸಹಾಯಕ ಆಗಿದ್ದಾರೆ. ಇಸ್ರೋದಲ್ಲಿ ಇಸ್ಟ್ರಾಕ್ ಪ್ರಮುಖ ವಿಭಾಗವಾಗಿದ್ದು, ಚಂದ್ರಯಾನ-3ರಿಂದ ಬರುವ ಮಾಹಿತಿಗಳು ಅಂದರೆ ಡೇಟಾಗಳನ್ನು ಸ್ವೀಕರಿಸಿ ಬಳಿಕ ಹೊರ ಜಗತ್ತಿಗೆ ಮಾಹಿತಿ ನೀಡುವುದು ಈ ವಿಭಾಗದ ಕೆಲಸವಾಗಿದೆ.
ಕಾಸರಗೋಡಿನ ಕೃಷ್ಣಮೋಹನ ಶ್ಯಾನುಭೋಗ್:ಇವರು ಕಾಸರಗೋಡಿನ ಚೆಂಗಳ ಬಳಿಯ ಎರಿಯಪಾಡಿಯ ದಿ.ವಿಷ್ಣು ಶ್ಯಾನುಭೋಗ್ ಮತ್ತು ಪ್ರೇಮಾವತಿ ದಂಪತಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಪಾಡಿ ಎಲ್.ಪಿ. ಶಾಲೆಯಲ್ಲಿ, ಎಸೆಸೆಲ್ಸಿಯನ್ನು 1981ರಲ್ಲಿ ಕಾಸರಗೋಡಿನ ಬಿಇಎಂ ಹೈಸ್ಕೂಲ್‌ನಲ್ಲಿ, ಪಿಯುಸಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು. ಅನಂತರ ಬಿ.ಟೆಕ್. ಶಿಕ್ಷಣವನ್ನು ಭೋಪಾಲದಲ್ಲೂ, ಎಂ.ಟೆಕ್. ಶಿಕ್ಷಣವನ್ನು ಸುರತ್ಕಲ್‌ನ ಎನ್ಐಟಿಕೆಯಲ್ಲೂ ಪೂರ್ತಿಗೊಳಿಸಿದ್ದರು. ಬಳಿಕ ದೇಶದ ವಿಜ್ಞಾನ ರಂಗದಲ್ಲಿ ಸೇವೆ ಆರಂಭಿಸಿ, ಆರಂಭದಲ್ಲಿ ಇಸ್ರೋದ ತಿರುವನಂತಪುರದ ಘಟಕದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಅವರು ಚಂದ್ರಯಾನ 2ರ ಸಿದ್ಧತೆ ನಡೆಸುವ ಅಂಗವಾಗಿ ಇಸ್ರೋದ ಬೆಂಗಳೂರು ಘಟಕಕ್ಕೆ ವರ್ಗಾವಣೆಗೊಂಡರು. ಬಳಿಕ ಚಂದ್ರಯಾನ 3ರ ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಉಪಗ್ರಹ ಸಂಚರಿಸಲು ಅಗತ್ಯವುಳ್ಳ ಇಂಧನ ಸೆಕ್ಷನ್‌ನ ಜನರಲ್ ಮ್ಯಾನೇಜರ್ ಹಾಗೂ ಡೈರೆಕ್ಟರ್ ಆಗಿ ಕೃಷ್ಣಮೋಹನ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ :ಚಂದ್ರನ ಅಂಗಳದಲ್ಲಿ ಸಂಶೋಧನೆ ಹೇಗೆ? : ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಮಾಹಿತಿ