ಸುಳ್ಯ (ದಕ್ಷಿಣ ಕನ್ನಡ) :ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕರಾವಳಿ ಹೋಟೆಲ್ ಸಮೀಪ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದು, ಮೂವರು ಸಾವನ್ನಪ್ಪಿರುವ ಘಟನೆ ಇಂದು (ಗುರುವಾರ) ಸಂಭವಿಸಿತು. ಹಾವೇರಿ ಜಿಲ್ಲೆಯ ಕಾಕೊಳ ತಾಂಡ ಗ್ರಾಮದ ನಿವಾಸಿಗಳಾದ ಚೆನ್ನಪ್ಪ, ರೇಖಪ್ಪ ಹಾಗು ಮಹಂತಪ್ಪ ಮೃತಪಟ್ಟ ಕಾರ್ಮಿಕರೆಂದು ಗುರುತಿಸಲಾಗಿದೆ.
ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರ ಪೈಕಿ ಚೆನ್ನಪ್ಪ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ರೇಖಪ್ಪ ಮತ್ತು ಮಹಂತಪ್ಪ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ರೇಖಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಹಂತಪ್ಪ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಈ ಕುರಿತು ಹುಲಿಯಪ್ಪ ನೀಡಿದ ದೂರಿನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ತುಮಕೂರು ರಸ್ತೆಯಲ್ಲಿ ಭಯಾನಕ ರಸ್ತೆ ಅಪಘಾತ, ಮೂವರು ಗಂಭೀರ- ಸಿಸಿಟಿವಿ ದೃಶ್ಯ