ಮಂಗಳೂರು (ದಕ್ಷಿಣ ಕನ್ನಡ):ಇಲ್ಲಿನ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿದೆ. ಪ್ರಕರಣ ಸಂಬಂಧ ವಿಜಯ್, ಅಭಿಲಾಷ್ ಹಾಗೂ ಸಂಜಯ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೂವರು ಯುವಕರ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ವಿದ್ಯಾರ್ಥಿಯೊಬ್ಬ ದೂರು ನೀಡಿದ್ದ. ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಬಳಿ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕಾರಣಕ್ಕೆ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು. ಬಂಧಿತ ಮೂವರು ಸಂಘಟನೆಯೊಂದಕ್ಕೆ ಸೇರಿದವರಾಗಿದ್ದು, ಇನ್ನೂ ಕೆಲ ಮಂದಿ ಇದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ಮೂಡಬಿದಿರೆಯ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಎದುರು ತನ್ನೂರು ಬೆಂಗಳೂರಿಗೆ ಹೋಗಲು ಬಸ್ಗೆ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿ ಮಾತನಾಡಿಸಿದ್ದ. ಇಬ್ಬರೂ ಮೂಡುಬಿದಿರೆಯ ಒಂದೇ ಕಾಲೇಜಿನ ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಬಸ್ ಬಂದ ಬಳಿಕ ವಿದ್ಯಾರ್ಥಿನಿ ಹತ್ತಿಕೊಂಡು ಹೋಗಿದ್ದಾಳೆ. ಆದರೆ, ಅಲ್ಲೇ ಇದ್ದ ಆರೋಪಿಗಳು ಮಾತನಾಡಿಸಿದ ವಿದ್ಯಾರ್ಥಿಯು ಬೇರೆ ಸಮುದಾಯದವ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಆ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದಿದ್ದರು.