ಕರ್ನಾಟಕ

karnataka

By ETV Bharat Karnataka Team

Published : Nov 7, 2023, 1:07 PM IST

ETV Bharat / state

ಮಂಗಳೂರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಡಿಕೇರಿಯ ಮೂವರು ಅರೆಸ್ಟ್​

ಮಂಗಳೂರು ಸಿಸಿಬಿ ಪೊಲೀಸರು ನಗರದ ವಿವಿಧೆಡೆ ಮಾದಕ ವಸ್ತು ಸಂಬಂಧ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

Etv Bharat
Etv Bharat

ಮಂಗಳೂರು: ಡ್ರಗ್ಸ್​​ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಲಾಡ್ಜ್​​ವೊಂದರ ಬಳಿ ಈ ಮೂವರು ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಡಿಕೇರಿಯ ಪ್ರಮೋದ್ ಎಮ್.ಜಿ ಯಾನೆ ಡಿಸ್ಕ್ (30), ಮೊಹಮ್ಮದ್ ರಾಶೀದ್ ಎಂ.ಝಡ್ ಯಾನೆ ರಾಶಿ (41),
ದರ್ಶನ್ ಎಸ್ (24) ಬಂಧಿತರು. ಇವರಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಲ್ಲಿ ಪ್ರಮೋದ್ ಎಮ್ ಜಿ ಯಾನೆ ಡಿಸ್ಕ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ.

ಮೊಹಮ್ಮದ್ ರಾಶೀದ್ ಎಂ.ಝಡ್ ಯಾನೆ ರಾಶಿ ಎಂಬಾತನ ಮೇಲೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆ, ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿವೆ. ದರ್ಶನ್ ಎಸ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

15 ಮಾದಕವ್ಯಸನಿಗಳ ಬಂಧನ :ನಗರದಲ್ಲಿ ಮಾದಕ ದ್ರವ್ಯ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 15 ಮಂದಿ ಮಾದಕವ್ಯಸನಿಗಳನ್ನು ಬಂಧಿಸಿದ್ದಾರೆ. ನವೆಂಬರ್​ 1 ರಿಂದ 4 ವಿಶೇಷ ತಂಡಗಳನ್ನು ರಚಿಸಿ ಸಂಬಂಧಪಟ್ಟ ಎಸಿಪಿಯವರ ಮೇಲ್ವಿಚಾರಣೆಯಲ್ಲಿ ಮಾದಕದ್ರವ್ಯದ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ.

ಈ ತಂಡಗಳು ನಾಲ್ಕು ದಿನಗಳಿಂದ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳು, ನಗರದ ವಿವಿಧ ಲಾಡ್ಜ್‌ಗಳು, ಪಬ್‌ಗಳು, ಹೋಟೆಲ್‌ಗಳು, ಹೋಂ ಸ್ಟೇಗಳು, ರೆಸಾರ್ಟ್‌ಗಳು ಮತ್ತು ವಿದ್ಯಾರ್ಥಿಗಳು ವಾಸವಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ನಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು 56 ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಮಾದಕವಸ್ತು ಸೇವನೆಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ 27 (ಬಿ) ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಒಟ್ಟು 12 ಮಾದಕವಸ್ತು ಸೇವನೆ ಪ್ರಕರಣಗಳನ್ನು ದಾಖಲಿಸಿ 15 ಮಾದಕವ್ಯಸನಿಗಳನ್ನು ದಸ್ತಗಿರಿ ಮಾಡಿದ್ದಾರೆ. ಇವರಿಂದ 7 ಮೊಬೈಲ್ ಫೋನ್‌ಗಳು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಮಾರ್ಗದರ್ಶನದಲ್ಲಿ ಎಸಿಪಿಗಳಾದ ಕೇಂದ್ರ ಉಪವಿಭಾಗ ಮಹೇಶ್ ಕುಮಾರ್, ಉತ್ತರ ಉಪವಿಭಾಗ ಮನೋಜ್ ಕುಮಾರ್ ನಾಯ್ಕ, ದಕ್ಷಿಣ ಉಪವಿಭಾಗ ಧನ್ಯಾ ನಾಯಕ್, ನಗರ ಅಪರಾಧ ಪತ್ತೆ ದಳ ಪಿ.ಎ. ಹೆಗ್ಡೆ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ :ಮಂಗಳೂರು ಸಿಸಿಬಿ ಕಾರ್ಯಾಚರಣೆ: ₹9 ಲಕ್ಷ ಮೌಲ್ಯದ ಎಂಡಿಎಂಎ ವಶ, ಮೂವರ ಬಂಧನ

ABOUT THE AUTHOR

...view details