ಉಳ್ಳಾಲ (ಮಂಗಳೂರು): ಮಾಂಸದಂಗಡಿ ಮಾಲೀಕನ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ಗುರುವಾರ ತಡರಾತ್ರಿ ನಡೆದಿತ್ತು.
ಇಲ್ಲಿನ ಹಳೆಕೋಟೆ ನಿವಾಸಿ ನಜೀರ್ (47) ಎಂಬವರ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ. ಇವರು ರಾತ್ರಿ ವೇಳೆ ತಮ್ಮ ಮನೆಯಿಂದ ಪಾನ್ ತಿನ್ನಲೆಂದು ತೊಕ್ಕೊಟ್ಟು ಒಳಪೇಟೆಯತ್ತ ಬರುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಇರಿದು ಹಲ್ಲೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಉಳ್ಳಾಲ, ಮುಕ್ಕಚ್ಚೇರಿ ಭಾಗದಲ್ಲಿ ಮಾಂಸ ಮಾರಾಟದಂಗಡಿ ಹೊಂದಿರುವ ನಜೀರ್‌ಗೆ ತೊಕ್ಕೊಟ್ಟು ಟಿ.ಸಿ ರೋಡ್‌ನಲ್ಲಿರುವ ಮರದ ಮಿಲ್‌ಗೆ ಸಂಬಂಧಿಸಿದಂತೆ ಕುಟುಂಬಸ್ಥರೊಂದಿಗೆ ವೈಮನಸ್ಸಿತ್ತಂತೆ. ಈ ಕುರಿತಾಗಿ ಕೆಲ ದಿನಗಳ ಹಿಂದಷ್ಟೇ ಗಲಾಟೆ ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿದ್ದು, ಬಳಿಕ ರಾಜಿಯಾಗಿ ಇತ್ಯರ್ಥಗೊಂಡಿತ್ತು.
ಸದ್ಯ ಗಾಯಾಳುವನ್ನು ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಕುಟುಂಬಕ್ಕೆ ಸಂಬಂಧಿಸಿದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.