ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉದ್ಯಮಿಯೊಬ್ಬರು ಪತ್ನಿ ಮತ್ತು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸುಮಾರು 19,024 ಅಡಿ ಎತ್ತರದ ಉಮ್ಲಿಂಗ್ ಲಾ ಪ್ರದೇಶವನ್ನು ಬೈಕ್‌ನಲ್ಲಿ ತಲುಪಿದ್ದು, ಇದೀಗ ಸುಳ್ಯಕ್ಕೆ ವಾಪಸಾಗುತ್ತಿದ್ದಾರೆ.
ಸುಳ್ಯ ತಾಲೂಕಿನ ನಿವಾಸಿಯಾದ ಮತ್ತು ಇಲ್ಲಿನ ಹಳೆಗೇಟ್ ಎಂಬಲ್ಲಿರುವ ಹೋಮ್ ಗ್ಯಾಲರಿ ಮಾಲೀಕರಾದ ತೌಹೀದ್ ರೆಹ್ಮಾನ್ ಹಾಗೂ ಅವರ ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ತಮ್ಮ ಬುಲೆಟ್ ಬೈಕ್‌ನಲ್ಲಿ ಉಮ್ಮಿಂಗ್ ಲಾ ತಲುಪಿದ ದಂಪತಿ. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17,498) ಗಿಂತ ಎತ್ತರದ ಮತ್ತು ಪ್ರಸ್ತುತ ಆಮ್ಲಜನಕದ ಮಟ್ಟವು ಶೇ.43 ಮಾತ್ರ ಇರುವ, ಜತೆಗೆ ಮೈನಸ್ 2 ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶ ಇರುವ ಈ ಸ್ಥಳಕ್ಕೆ ತಲುಪಿದವರಲ್ಲಿ ಮೂರುವರೆ ವರ್ಷ ಪ್ರಾಯದ ಜಝೀಲ್ ರೆಹ್ಮಾನ್ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾನೆ.
ಈ ದಾಖಲೆಯು ಇಂಡಿಯಾ ರೆಕಾರ್ಡ್ ಬುಕ್‌ನಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ. ವಿಶ್ವದಲ್ಲೇ ಅತಿ ಎತ್ತರದ ಮೋಟಾರು ರಸ್ತೆ ಭಾರತದಲ್ಲಿದೆ. ಪ್ರಸ್ತುತ ಈಗ ಇರುವ ಅತೀ ಎತ್ತರದ ಮೋಟಾರು ರಸ್ತೆ ಭಾರತದ ಲಡಾಖ್‌ನ ಮತ್ತು ಚೀನಾದ ಗಡಿಯಲ್ಲಿರುವ ಉಮ್ಲಿಂಗ್ ಲಾ ಪ್ರದೇಶ ಆಗಿದೆ. ಇದರ ಎತ್ತರವು ಸರಿಸುಮಾರು 19,024 ಅಡಿ ಆಗಿರುತ್ತದೆ. ಇದು 52 ಕಿಮೀ ದೂರದ ರಸ್ತೆಯಾಗಿದ್ದು, ಚಿಶುಮ್ಲೆಯನ್ನು ಡೆಮ್‌ಚೋಕ್‌ಗೆ ಸಂಪರ್ಕಿಸುತ್ತದೆ. ಇದು ಗಡಿ ವಾಸ್ತವ ರೇಖೆಯಲ್ಲಿದೆ (ಎಲ್‌ಎಸಿ). ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಪ್ರಮುಖ ಸ್ಥಳವೂ ಆಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ರೆಹ್ಮಾನ್ ಅವರು ನನಗೆ ಸಂಚಾರ ಎಂಬುದು ಪ್ರೀತಿಯ ಹವ್ಯಾಸವಾಗಿದೆ. ಈ ಹಿಂದೆ ಕಾರಿನಲ್ಲಿ ನಾನು ಸ್ನೇಹಿತರೊಂದಿಗೆ ಭಾರತಾದ್ಯಂತ ಎಲ್ಲಾ ಸ್ಥಳಗಳನ್ನು ಸುತ್ತಾಡಿದ್ದೇನೆ. ಲಡಾಖ್ಗೇ ಸುಮಾರು 6 ಬಾರಿ ಬಂದಿದ್ದೇನೆ. ಉಮ್ಲಿಂಗ್ ಲಾಕ್ಕೆ ಇದೇ ಮೊದಲು ಪತ್ನಿ ಮತ್ತು ಮಗನೊಂದಿಗೆ ಬಾರಿ ಬೈಕ್‌ನಲ್ಲಿ ಬಂದಿದ್ದೇನೆ. ಆಗಸ್ಟ್ 15ರಂದು ನಾವು ಸುಳ್ಯದಿಂದ ಹೊರಟು 24 ದಿನಗಳ ಪ್ರಯಾಣ ಮುಗಿಸಿ ಇದೀಗ ಊರಿನ ಕಡೆಗೆ ವಾಪಸ್ ಹೊರಟಿದ್ದೇವೆ.