ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ನ ಆರೋಪಿಯ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದ ಸಂದರ್ಭದಲ್ಲಿ ಹತ್ಯೆ ಆರೋಪಿಯ ಸಹೋದರನ ಜೀವ ಬೆದರಿಕೆ ಪ್ರಕರಣದಿಂದ ಬೆಳ್ಳಾರೆಯಲ್ಲಿ ಮತ್ತೆ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಫೀಕ್ ಎಂಬಾತನ ಸಹೋದರ ಅಬ್ದುಲ್ ಸಪ್ರಿತ್ ಯಾನೆ ಅಬ್ದುಲ್ ಸಫ್ರಿಜ್ (21) ಬಂಧಿತ ಆರೋಪಿ. ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತ, ಬೆಳ್ಳಾರೆಯಲ್ಲಿರುವ ದೇವಿ ಹೈಟ್ಸ್ ಲಾಡ್ಜಿನಲ್ಲಿ ಮ್ಯಾನೇಜರ್ ಆಗಿರುವ ಪ್ರಶಾಂತ ಪೂಂಜಾ ಎಂಬುವರಿಗೆ ಅಬ್ದುಲ್ ಸಪ್ರಿತ್ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆವೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಯಲ್ಲಿ ಬೆಳ್ಳಾರೆ ಠಾಣೆ ಮುಂದೆ ನಿನ್ನೆ ರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು.