ಮಂಗಳೂರು:ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡುವವರಿಗೆ ತಲೆ ಇಲ್ಲ. ಯಾರೆಲ್ಲಾ ಸಾವರ್ಕರ್ ವಿರುದ್ಧ ಮಾತನಾಡುತ್ತಾರೋ ಅವರೆಲ್ಲರನ್ನೂ ಅಂಡಮಾನ್-ನಿಕೋಬಾರ್ನ ಸೆಲ್ಯುಲರ್ ಜೈಲಿನಲ್ಲಿ ಒಂದು ತಿಂಗಳು ಕಾಲ ಇರಿಸಿದರೆ, ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ತೆಗೆದು ನೋಡಿದರೆ ನೆಹರೂ ಕುಟುಂಬ ಬಿಟ್ಟರೆ ಬೇರೆ ಹೆಸರೇ ಇಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲರನ್ನೆಲ್ಲಾ ಪಕ್ಕಕ್ಕೆ ತಳ್ಳಿಬಿಟ್ಟಿದ್ದಾರೆ. ಬರೀ ಅವರದೊಂದು ಕುಟುಂಬ ಮಾತ್ರ ಸ್ವಾತಂತ್ರ್ಯ ಹೋರಾಟ ಮಾಡಿದ್ದು ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಕಡಿಕಾರಿದರು.
ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ಸಿದ್ದರಾಮಯ್ಯರ ನಾಲಿಗೆ ಮೇಲೆ ಹಿಡಿತವಿಲ್ಲ, ಅವರದ್ದು ಎಲುಬಿಲ್ಲದ ನಾಲಿಗೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಅವರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಕಳಂಕ ಬಂದಿದೆ. ರಾಜಕಾರಣಿಗಳ ಬಗ್ಗೆ ಮಾತನಾಡಲಿ. ಆದರೆ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡುವವರಿಗೆ ಜನರೇ ಬಹಿಷ್ಕಾರ ಹಾಕಬೇಕು. ಆಗಲೇ ಇಂತವರಿಗೆ ಬುದ್ಧಿ ಬರೋದು ಎಂದು ಅಶೋಕ್ ತಿರುಗೇಟು ನೀಡಿದರು.
ಇನ್ನು, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಪಾಠವಿದ್ದು, ಅದನ್ನು ತೆಗೆಯಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ಟಿಪ್ಪು ಸುಲ್ತಾನ್ ವಿವಾದಿತ ವ್ಯಕ್ತಿ. ಮೈಸೂರು ಅರಸರ ಆಡಳಿತ ಕಾಲದಲ್ಲಿ ಸೇನಾಧಿಕಾರಿಯಾಗಿದ್ದು, ಅವರನ್ನು ಕಿತ್ತುಹಾಕಿ ಆಡಳಿತ ವಶಪಡಿಸಿಕೊಂಡವರು. ಅಕ್ರಮವಾಗಿ ಅಧಿಕಾರ ನಡೆಸಿದವರು. ಅಲ್ಲದೆ ಬ್ರಿಟಿಷರ ಜೊತೆಯಲ್ಲಿ ಶಾಮೀಲಾಗಿರೋದಕ್ಕೂ ಹಲವಾರು ದಾಖಲಿಗಳಿವೆ. ಟಿಪ್ಪು ಸುಲ್ತಾನ್ ತಾನು ಬದುಕೋದಕ್ಕೆ ಮಕ್ಕಳನ್ನೇ ಅಡವಿಡುತ್ತಾನೆ. ಹಾಗಂತ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಹೋರಾಡಿದವರಲ್ಲ. ತನ್ನ ರಾಜ್ಯ ಉಳಿಸೋದಕ್ಕೆ ಅವರು ಹೋರಾಡಿದ್ದರು ಎಂದು ಆರೋಪಿಸಿದರು.
ಆ ತರಹದ ವ್ಯಕ್ತಿಗಳ ಬಗ್ಗೆ ಚರಿತ್ರೆಯಲ್ಲಿ ಸೇರಿಸಲಾಗಿದೆ. ಅದರ ಬಗ್ಗೆ ಅಪ್ಪಚ್ಚು ರಂಜನ್ ಹೇಳಿಕೆ ನೀಡಿರೋದನ್ನು ಸರ್ಕಾರ ಗಮನ ಹರಿಸುತ್ತದೆ. ಅದನ್ನು ಪರಿಶೀಲನೆ ನಡೆಸಲಾಗುತ್ತದೆ. ಪಕ್ಷ, ಎಡ, ಬಲಗಳು ಬೇರೆ. ಆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಏನು ಗೌರವ ಸಲ್ಲಬೇಕೋ ಅದನ್ನು ಈ ದೇಶ ಗೌರವಪೂರ್ವಕವಾಗಿ ಕೊಡಬೇಕು ಎಂದು ಅಶೋಕ್ ಹೇಳಿದ್ರು.