ಮಂಗಳೂರು (ಪುತ್ತೂರು) : ತುಳುನಾಡಿನ ವಿಶಿಷ್ಟ ಕೂಟವಾಗಿರುವ ಕಂಬಳವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿ ಕಂಬಳ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಪೂರಕವಾದ ಕಾನೂನು ಹೋರಾಟ ನಡೆಸಲಾಗುವುದು. ಕಂಬಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕರಿಗೆ ಸೀರೆ, ಪಂಚೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಕಂಬಳಕ್ಕೆ ಸಮಸ್ಯೆ ಉಂಟಾಗಿದೆ. ಒಂದು ಬಾರಿ ಕಂಬಳ ನಿಲ್ಲಿಸುವ ಕೆಲಸವೂ ಅವರಿಂದ ನಡೆದಿದೆ. ಇದೀಗ ಅವರು ಸುಪ್ರೀಂ ಕೋರ್ಟ್ಗೆ ಮತ್ತೆ ದೂರು ನೀಡಿ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಜನತೆಯ ಕಂಬಳ ಕ್ರೀಡೆಯನ್ನು ನಿಲ್ಲಿಸುವ ಪ್ರಯತ್ನ ಆರಂಭಿಸಿದ್ದಾರೆ. 1,360 ಪುಟಗಳ ದೂರನ್ನು ,ಕಂಬಳ ಮತ್ತು ಜಲ್ಲಿಕಟ್ಟು ಕ್ರೀಡೆಗಳ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ವಕೀಲ ಸಂಜಯ ನೂಲಿ ಮೂಲಕ ಕಂಬಳದಲ್ಲಿ ಯಾವುದೇ ಹಿಂಸೆ ಇಲ್ಲ ಎಂದು ಸಾಬೀತು ಮಾಡಿ ಕಂಬಳ ನಡೆಸುತ್ತೇವೆ ಎಂದು ಹೇಳಿದರು.