ಬೆಂಗಳೂರು: ರಾಜ್ಯದಲ್ಲಿ ಖಾಸಗಿ ದೇವಸ್ಥಾನಗಳನ್ನು ಸರ್ಕಾರ ಸ್ವಾಯತ್ತ ಪಡೆಯುವ ಯಾವುದೇ ಪ್ರಸಂಗ ಇಲ್ಲ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗಾಗಿ ಯಾವುದೇ ಆತಂಕ ಬೇಡ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಖಾಸಗಿ ದೇವಾಲಯ ವಿವರ ನೀಡಿ ನೋಂದಣಿ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಬರೀ ಹಿಂದೂ ಧರ್ಮಕ್ಕೆ ಸೀಮಿತ ಯಾಕೆ ಎಂದು ಸದಸ್ಯ ಸುನೀಲ್ ಸುಬ್ರಮಣಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಈ ರೀತಿ ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ್ದೇನೆ. ಸುತ್ತೋಲೆಯಿಂದ ಖಾಸಗಿ ದೇವಸ್ಥಾನದವರು ಆತಂಕ ಪಡುವ ಅಗತ್ಯ ಇಲ್ಲ. ಇದು ನಿರಂತರ ಪ್ರಕ್ರಿಯೆಯಾಗಿದೆ. ದೇವಸ್ಥಾನಗಳನ್ನು ನೋಂದಣಿ ಮಾಡಿಕೊಳ್ಳಬೇಕು ಅಂತ 2015ರಲ್ಲಿ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರ ಅರ್ಥ ಸರ್ಕಾರ ಖಾಸಗಿ ದೇವಸ್ಥಾನಗಳ ಮೇಲೆ ಹಕ್ಕು ಚಲಾಯಿಸುವುದು, ನಿಗಾ ಇಡೋದು. ಸ್ವಾಯತ್ತ ತೆಗೆದುಕೊಳ್ಳುವುದಲ್ಲ ಎಂದು ಸ್ಪಷ್ಟಪಡಿಸಿದರು.
ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ಕೊಟ್ಟಿದ್ದೇವೆ. ಖಾಸಗಿ ದೇವಸ್ಥಾನ ಸ್ವಾಯತ್ತ ಪಡೆಯುವ ಯಾವುದೇ ಪ್ರಸಂಗ ಇಲ್ಲ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. 2011ರಲ್ಲಿ ಕಾಯ್ದೆ ತಂದು, 2015ರಲ್ಲಿ ಜಾರಿ ಮಾಡಿದ್ದಾರೆ. 2016, 17, 18, 19 ಮತ್ತು 2020ರಲ್ಲಿ ನೆನಪಿನ ಸುತ್ತೋಲೆ ಕೊಡುತ್ತಾ ಬಂದಿದ್ದೇವೆ. ಮೊನ್ನೆ ಸಹ ಅಂತಹದೇ ಸುತ್ತೋಲೆ ಕೊಟ್ಟಿದ್ದೇವೆ. ನನ್ನ ಗಮನಕ್ಕೆ ಬಾರದೇ ಇದು ರೆಗ್ಯುಲರ್ ಪ್ರೋಸಸ್ ರೀತಿ ಸುತ್ತೋಲೆ ಹೋಗಿದೆ. ಈ ಸುತ್ತೋಲೆ ವಾಪಸ್ ತೆಗೆದುಕೊಳ್ಳಬೇಕು ಅಂತ ಯಾರಾದರೂ ಹೇಳಿದರೆ ಪರಿಶೀಲನೆ ಮಾಡಲಾಗುತ್ತದೆ ಎಂದರು.