ಮಂಗಳೂರು:ಜೋರು ಮಳೆ ಬಂದರೂ ಇವರು ಬೇಕು, ಜನರ ಬೇಕು-ಬೇಡಗಳಲ್ಲಿಯೂ ಇವರೇ ಬೇಕು. ಆದರೆ ದೇಶದ ಪ್ರಮುಖ ಧಾರ್ಮಿಕ ಸ್ಥಳ ಮತ್ತು ಅತ್ಯಧಿಕ ಆದಾಯವಿರುವ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಮೇಲ್ಛಾವಣಿಗೆ ಮಾತ್ರ ಟರ್ಪಾಲೇ ಬೇಕು!. ಯಾಕೆಂದರೆ, ಇಲ್ಲಿನ ಪೊಲೀಸ್ ಠಾಣೆಯ ಮೇಲ್ಛಾವಣಿ ರಿಪೇರಿಗೆ ಹಣವಿಲ್ಲದೆ ನೀರು ಸೋರುವಿಕೆಯನ್ನು ತಡೆಯಲು ಟರ್ಪಾಲು ಹೊದಿಸಲಾಗಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೇಲ್ಛಾವಣಿ ಶಿಥಿಲಗೊಂಡು 3 ರಿಂದ 4 ವರ್ಷಗಳೇ ಆಗಿದೆ. ಕಟ್ಟಡದ ಒಳಭಾಗದ ಮೇಲ್ಛಾವಣಿ ಶಿಥಿಲಗೊಂಡು ಹಂಚುಗಳ ಮಧ್ಯೆ ಅಲ್ಲಲ್ಲಿ ನೀರು ಸೋರುತ್ತಿದೆ. ಪ್ರಕರಣಗಳ ದಾಖಲೆಗಳು ಒದ್ದೆಯಾಗುವ ಸಾಧ್ಯತೆ ಇದೆ. ಅಪರಾಧಿಗಳನ್ನು ದಸ್ತಗಿರಿ ಮಾಡಿ ಕೂಡಿಹಾಕುವ ಕೊಠಡಿಯಲ್ಲಿ ನೀರು ತುಂಬುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಟರ್ಪಾಲು ಹೊದಿಸುವುದು ಇಲ್ಲಿ ಅನಿವಾರ್ಯವಾಗಿದೆ.
ಕೋಟಿ ಹಣ ಎಲ್ಲಿ ಹೋಯ್ತು?:ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗೃಹಸಚಿವ ಆರಗ ಜಾನೇಂದ್ರ ಬಂದಿದ್ದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸುಬ್ರಹ್ಮಣ್ಯ ಠಾಣೆಗೆ ಒಂದು ಕೋಟಿ ರೂ ಅನುದಾನವಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಕೋಟಿ ಅನುದಾನ ಟೆಂಡರ್ ಕರೆದದ್ದಾಗಲಿ, ಅನುದಾನ ಬಿಡುಗಡೆ ಮಾಡಿದ್ದಾಗಲಿ ಮಾತ್ರ ಗೊತ್ತಾಗಿಲ್ಲ. ಠಾಣೆಯ ಮೇಲ್ಛಾವಣಿ ಬೀಳುವ ಮುಂಚೆಯೇ ಹೊಸ ಕಟ್ಟಡಕ್ಕೆ ಶಿಲಾನ್ಯಾಸವಾಗುತ್ತಾ? ಎಂದು ಕಾದು ನೋಡಬೇಕಿದೆ.