ಮಂಗಳೂರು :ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ಪ್ರಾಬಲ್ಯ ಹೊಂದಿವೆ. ಕೆಎಸ್ಆರ್ಟಿಸಿ ಬಸ್ಗಳು ವಿರಳವಾಗಿರುವ ಈ ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳ ಓಡಾಟವೇ ಜಾಸ್ತಿ. ಆದರೆ ಈ ಖಾಸಗಿ ಬಸ್ಗಳು ನಿಯಮ ಮೀರಿ ಸಂಚರಿಸಿ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಘಟನೆ 1: ಸಂಚಾರದಲ್ಲಿದ್ದ ನಗರ ಸಾರಿಗೆ ಬಸ್ನಿಂದ ಕಂಡಕ್ಟರ್ ಹೊರಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟಿರುವ ಘಟನೆ ನಗರದ ನಂತೂರಿನಲ್ಲಿ ಮಂಗಳವಾರ ನಡೆದಿತ್ತು. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿರುವ, ಪ್ರಸ್ತುತ ಸುರತ್ಕಲ್ ತಡಂಬೈಲ್ನಲ್ಲಿ ವಾಸ್ತವ್ಯವಿರುವ ಈರಯ್ಯ (23) ಎಂಬ ಕಂಡಕ್ಟರ್ ಮೃತಪಟ್ಟಿದ್ದರು. ಇವರು 15 ನಂಬರ್ನ ಖಾಸಗಿ ಸಿಟಿ ಬಸ್ ನಿರ್ವಾಹಕರಾಗಿದ್ದರು. ಬಸ್ಸಿನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ 2: ನಗರದ ಸ್ಟೇಟ್ ಬ್ಯಾಂಕ್-ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆಯ ವೇಳೆ ಮೊಬೈಲ್ ಉಪಯೋಗಿಸುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದರು. 42 ನಂಬರಿನ ಸೈಂಟ್ ಆ್ಯಂಟನಿ ಬಸ್ ಚಾಲಕ ನಿರ್ಲಕ್ಷ್ಯನ ಪ್ರದರ್ಶಿಸಿ ಮೊಬೈಲ್ ಉಪಯೋಗಿಸುತ್ತಾ ಬಸ್ ಚಲಾಯಿಸಿದ್ದಾರೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟುವರೆಗೂ ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತವಾಗಿ ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಮಂಗಳೂರು ನಗರ ಪೊಲೀಸರು ತಪ್ಪಿತಸ್ಥ ಚಾಲಕನ ಡಿಎಲ್ ರದ್ದುಗೊಳಿಸಲು ಆರ್‌ಟಿಒಗೆ ಸೂಚನೆ ನೀಡಿದ್ದಾರೆ.
ಘಟನೆ 3:ಪಾದಚಾರಿ ಮಹಿಳೆಯೊಬ್ಬರು ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಕುರಿತಾದ ವಿಡಿಯೋ ವೈರಲ್ ಆಗಿತ್ತು. ಮಹಿಳೆ ಪಕ್ಕದಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಡ್ರೈವರ್ ಕೂಡಲೇ ಎಡಕ್ಕೆ ಬಸ್ ತಿರುಗಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ, ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಬಸ್ ಚಾಲಕ ಮತ್ತು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ 4: ಮೂಡುಬಿದಿರೆ ತಾಲೂಕಿನ ವಿದ್ಯಾಗಿರಿ ಎಂಬಲ್ಲಿ ಬಸ್ ಹತ್ತುವ ವೇಳೆ ಬಸ್ ಸಂಚರಿಸಿದ ಪರಿಣಾಮ ವಿದ್ಯಾರ್ಥಿನಿ ಬಸ್ನಿಂದ ಬಿದ್ದ ಘಟನೆ 2022 ಜೂನ್ 30ರಂದು ನಡೆದಿತ್ತು. ಪರಿಣಾಮ ಆಕೆ ಬಸ್ನ ಹಿಂಬದಿಗೆ ಚಕ್ರಕ್ಕೆ ಬಿದ್ದು ಕೂದಲೆಳೆ ಅಂತರದಲ್ಲಿ ಸಾವಿನ ಮನೆಯ ಕದ ತಟ್ಟಿ ವಾಪಸ್ ಬಂದಿದ್ದಳು. ಕಾಲೇಜು ಮುಗಿಸಿ ಮರಳಿ ಮನೆಗೆ ಬರುವ ವೇಳೆ ದುರ್ಘಟನೆ ಸಂಭವಿಸಿತ್ತು. ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿನಿ, ಬಸ್ ಬಂದಿದೆ ಎಂದು ಹತ್ತಲು ಹೋಗಿದ್ದಾಳೆ. ಆಕೆ ಬಸ್ನ ಮೆಟ್ಟಿಲಿನಲ್ಲಿರುವಾಗಲೇ ಬಸ್ ಚಲಿಸಿದೆ. ಅಷ್ಟಾಗುವಾಗ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಹಿಂಬದಿಯ ಚಕ್ರದಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಳೆು.