ಕರ್ನಾಟಕ

karnataka

ETV Bharat / state

ಜಾತಿ ಗಣತಿ ವಿಚಾರದಲ್ಲಿ ಸಿಎಂ - ಡಿಸಿಎಂ ಮಧ್ಯೆ ಯಾವುದೇ ಗೊಂದಲಗಳಿಲ್ಲ: ಸಚಿವ ಭೈರತಿ ಸುರೇಶ್ - caste census report

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸಚಿವರಾದ ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದಾರೆ.

ಸಚಿವ ಭೈರತಿ ಸುರೇಶ್
ಸಚಿವ ಭೈರತಿ ಸುರೇಶ್

By ETV Bharat Karnataka Team

Published : Nov 24, 2023, 5:17 PM IST

ಸಚಿವ ಭೈರತಿ ಸುರೇಶ್

ಮಂಗಳೂರು: ಜಾತಿ ಗಣತಿ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಜಾತಿ ಗಣತಿ ವರದಿ ತೆಗೆದುಕೊಂಡು ಸಾಧಕ ಬಾಧಕ ನೋಡಿ ಸರ್ಕಾರ ಅನುಮೋದನೆ ಮಾಡಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಅನ್ನುವುದು ಯಾರದ್ದೋ ಜಾತಿಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಮಾಡಿರುವುದಲ್ಲ. ಬೇರೆ ಬೇರೆ ಜಾತಿಯ ಆರ್ಥಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಜಾತಿ ಗಣತಿ ಮಾಡಲಾಗಿದೆ‌. ಎಲ್ಲಾ ಜಾತಿಯವರನ್ನು, ಸಮಾಜವನ್ನು ಮೇಲೆ ಎತ್ತುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ಸಚಿವ ಸಂಪುಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಅವರ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಡ್ವೊಕೇಟ್ ಜನರಲ್​ಗೆ ಅಂದಿನ ಸಿಎಂ ಯಡಿಯೂರಪ್ಪ ಮೌಖಿಕ ಆದೇಶ ಕೊಟ್ಟಿದ್ದರು. ಆದರೆ, ಮೌಖಿಕ ಆದೇಶ ಕೊಡುವುದು ತಪ್ಪು ಅನ್ನೋದು ಆಗಿನ ಎಜಿ ಶಶಿಕಿರಣ್ ಶೆಟ್ಟಿ ಅವರ ಅಭಿಪ್ರಾಯ. ಆ ಪ್ರಕಾರ ಈಗ ಕೊಟ್ಟ ಅನುಮತಿಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಸಿಬಿಐ ಸುಪ್ರೀಂ ಅಥವಾ ಹೈಕೋರ್ಟ್ ಹೋಗುವುದು ಅವರಿಗೆ ಬಿಟ್ಟಿದ್ದು ಎಂದರು.

ಆಗಿನ ಸರ್ಕಾರ ಮಾಡಿರೋದು ತಪ್ಪು ಎಂದು ಎಜಿ ವರದಿ ನೀಡಿದ್ದಾರೆ. ಆದ್ದರಿಂದ ಕ್ಯಾಬಿನೆಟ್​ಗೂ ಅದು ತಪ್ಪು ಎಂದು ಅನ್ನಿಸಿ ವಾಪಸ್ ತೆಗೆದುಕೊಂಡಿದೆ. ಬಿಜೆಪಿಯವರು ಪ್ರಾಮಾಣಿಕರಾಗಿದ್ದಲ್ಲಿ ಎಜಿಯವರನ್ನು ಕೇಳಿ ಕೊಡಬೇಕಿತ್ತು. ಆದರೆ, ಎಜಿಯವರು ಅಭಿಪ್ರಾಯ ಕೊಡುವ ಮೊದಲೇ ಆಗಿನ ಸಿಎಂ ಸಿಬಿಐ ಕೊಟ್ಟಿದ್ದು ತಪ್ಪಲ್ಲವೇ? ಎಂದು ಪ್ರಶ್ನಿಸಿದ ಸಚಿವರು, ನಮ್ಮ ಪ್ರಾಮಾಣಿಕತೆ ಪ್ರಶ್ನೆ ಮಾಡುವ ಇವರು, ಎಜಿ ಅವರ ಬಳಿ ಸಲಹೆಗಳನ್ನು ಕೇಳಬೇಕಿತ್ತು. ಈಗಿನ ಎಜಿ ಅದು ತಪ್ಪು ಎಂದಿರುವ ಕಾರಣಕ್ಕೆ ಕ್ಯಾಬಿನೆಟ್ ಈ ನಿರ್ಧಾರ ತೆಗೊಂಡಿದೆ. ಇನ್ನು ಕಾಂಗ್ರೆಸ್​ಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಎಂಬ ನನಗೆ ಗೊತ್ತಿಲ್ಲ ಎಂದರು.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಚಾರಕ್ಕೆ, ವಿಜಯೇಂದ್ರ ಅಥವಾ ಯಾರೇ ಬಂದರೂ ಪಕ್ಷದಲ್ಲಿ ಬದಲಾವಣೆ ಆಗಲ್ಲ. ಕಾಂಗ್ರೆಸ್​ಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ಸರ್ಕಾರವೂ ಸರಿಯಿದೆ. ಸೋಮಣ್ಣ ವಿಚಾರದಲ್ಲಿ ಮಾತುಕತೆ ಆಗುತ್ತಿದೆ‌, ಏನಾಗಿದೆ ಗೊತ್ತಿಲ್ಲ ಎಂದರು‌.

ಅದೇ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ರಾಜಕೀಯ ದುರುದ್ದೇಶದಿಂದ ಅಂದಿನ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ಆದೇಶ ನೀಡಿತ್ತು. ತನಿಖೆಗೂ ಮುನ್ನ ಅಡ್ವೊಕೇಟ್ ಜನರಲ್ ಮತ್ತು ಇಲಾಖೆ ಮಾಹಿತಿ ಪಡೆದಿರಲಿಲ್ಲ. ಮೌಕಿಕ ಆದೇಶದ ಮೇಲೆ ರಾಜಕೀಯ ಒತ್ತಡದಲ್ಲಿ ತೀರ್ಮಾನ ಕೈಗೊಂಡಿತ್ತು. ತನಿಖೆ ವಹಿಸುವಾಗ ಸಕ್ಷಮ ಪ್ರಾಧಿಕಾರ, ಇಲಾಖಾವಾರು ಯಾವುದೇ ಅಭಿಪ್ರಾಯ ಪಡೆಯದೇ ಸಿಬಿಐ ತನಿಖೆ ಆದೇಶಿಸಿದೆ. ಇ.ಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲು ಹೇಳಿಲ್ಲ, ಬದಲಾಗಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದೆ. ಹಾಗಾಗಿ ಇದೊಂದು ಕಾನೂನುಬಾಹಿರ ನಿರ್ಧಾರವಾಗಿದ್ದು, ಹಿಂದಿನ ಸರ್ಕಾರ ರಾಜಕೀಯ ದುರುದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ ಎಂದು ತಮ್ಮ ಸರ್ಕಾರ ತೆಗೆದುಕೊಂಡ ನಡೆಯನ್ನು ಅವರು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಡಿಕೆಶಿ ಪ್ರಕರಣ: ಹಿಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ- ಸಿಎಂ ಸಿದ್ದರಾಮಯ್ಯ

ABOUT THE AUTHOR

...view details