ಪುತ್ತೂರು: ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ದೇಶದಾದ್ಯಂತ ಕಾಂಗ್ರೆಸ್‌ನ ಪ್ರಾಬಲ್ಯ ಕುಸಿಯುತ್ತಿದ್ದು, ಬಿಜೆಪಿ ಎಲ್ಲಾ ಹಂತಗಳಲ್ಲೂ ಕೂಡಾ ಗೆಲುವು ಸಾಧಿಸುತ್ತಿದೆ. ಮುಂದೆ ದೇಶದಲ್ಲಿ ಕಾಂಗ್ರೆಸ್‌ನ ವಿಳಾಸವೇ ಇಲ್ಲದ ದಿನಗಳು ಬರಲಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.
ಡಿ.ವಿ. ಸದಾನಂದ ಗೌಡ ಮಾತನಾಡಿದರು ನಗರದಲ್ಲಿ ವಿಧಾನಸಭಾ ಕ್ಷೇತ್ರ ಮಟ್ಟದ ಬಿಜೆಪಿ ಜನಸೇವಕ ಸಮಾವೇಶ ಹಾಗೂ ಸಚಿವ ಎಸ್.ಅಂಗಾರ ಅವರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್‌ನ್ನು ಪಾತಾಳಕ್ಕೆ ತಳ್ಳಲು ಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ಗೆದ್ದರೂ, ದ.ಕ. ಜಿಲ್ಲೆಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಆಪಾದನೆ ಇತ್ತು. ಆದರೆ, ಸುಳ್ಯ ಮೀಸಲು ಕ್ಷೇತ್ರದಲ್ಲಿ 6 ಬಾರಿ ಗೆಲುವು ಸಾಧಿಸಿರುವ ಯೋಗ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಈ ಆಪಾದನೆಯಿಂದ ಮುಕ್ತಿ ಪಡೆಯಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದವರು ಸಚಿವ ಅಂಗಾರ ಅವರನ್ನು ನೋಡಿ ಕಲಿಯಲು ಬಹಳಷ್ಟು ಇದೆ. ಸಂಘಟನೆಯ ಹಿರಿಯರ ಪರಿಶ್ರಮದಿಂದಾಗಿ ಬಿಜೆಪಿ ಇಂದು ಈ ಮಟ್ಟಕ್ಕೆ ತಲುಪಿದೆ ಎಂಬುದನ್ನು ಕಾರ್ಯಕರ್ತರು ಸದಾ ನೆನಪಿಟ್ಟುಕೊಳ್ಳಬೇಕು. ರಾಜ್ಯದಲ್ಲಿ ಶೇ.63ರಷ್ಟು ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ನಾವೆಲ್ಲರೂ ಪ್ರಜಾ ಸೇವಕರು ಎಂಬ ಅರಿವಿನಿಂದ ಕೆಲಸ ಮಾಡಬೇಕು. ಸುಶಾಸನ ಮತ್ತು ಅಭಿವೃದ್ಧಿಯ ದೃಷ್ಠಿಯಲ್ಲಿ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸಗಳಿಂದ ಗ್ರಾಮ ಪಂಚಾಯಿತಿ ಸದಸ್ಯರು ಸಹಿತ ಎಲ್ಲಾ ಸದಸ್ಯರು ಪ್ರೇರಣೆ ಪಡೆಯಬೇಕು. ಪ್ರತಿಪಕ್ಷದವರ ಟೀಕಾ ವಸ್ತುವಾಗಿ ನಾವು ಹೆಸರು ಕೆಡಿಸಿಕೊಳ್ಳಬಾರದು. ಒಳ್ಳೆಯ ಕೆಲಸಗಳು ನಡೆದಾಗ ಜನರು ಕೂಡಾ ಗ್ರಾಮ ಪಂಚಾಯಿತಿ ಸದಸ್ಯರನ್ನು ಗುರುತಿಸಿ ಗೌರವಿಸುತ್ತಾರೆ ಎಂದರು.
ಓದಿ:'ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದು ಕೊಂಡ ಮೇಲೆ ಹುಚ್ಚರಾಗಿದ್ದಾರೆ'
ನೂತನ ಸಚಿವ ಎಸ್.ಅಂಗಾರ ರಾಜ್ಯ ಸಚಿವ ಸಂಪುಟದಲ್ಲಿ ಯಾವ ಖಾತೆಯನ್ನು ಪಡೆದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಅವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಪಟ್ಟ ದೊರೆತರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಡಿವಿಎಸ್ ವ್ಯಕ್ತಪಡಿಸಿದರು.